ಉ.ಪ್ರದೇಶದ ಲೋಕಸಭೆ ಚುನಾವಣೆಯಲ್ಲೂ ಮ್ಯಾಚ್ ಫಿಕ್ಸಿಂಗ್

ಭಾನುವಾರ, 30 ಮಾರ್ಚ್ 2014 (11:22 IST)
PTI
ಉತ್ತರಪ್ರದೇಶದ ಲಖನೌನಲ್ಲಿ 'ಚುನಾವಣಾ ಫಿಕ್ಸಿಂಗ್' ನಡೆದಿದೆಯೇ? ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರ ಸುಲಭ ಗೆಲವಿಗೆ ಸ್ವತಃ ಮುಲಾಯಂ ಅವರೇ ದಾರಿ ಮಾಡಿಕೊಟ್ಟಿದ್ದಾರೆಯೇ?

ಹೌದು. ರಾಜನಾಥ್ ಕಣಕ್ಕಿಳಿದಿರುವ ಲಖನೌನಲ್ಲಿ ಎಸ್ಪಿಯಿಂದ ಸ್ಪರ್ಧಿಸಿದ್ದ ಪ್ರಭಾವಿ ಅಭ್ಯರ್ಥಿಯನ್ನು ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರೇ ಬದಲಾಯಿಸಿದ್ದಾರೆ. ಜತೆಗೆ, ಅಲ್ಲಿ ಹೆಚ್ಚು ಪ್ರಭಾವಿಯಲ್ಲದ ವ್ಯಕ್ತಿಯೊಬ್ಬರನ್ನು ಕಣಕ್ಕಿಳಿಸಿದ್ದಾರೆ. ಈ ಮೂಲಕ ತಮ್ಮ ಗೆಳೆಯ ರಾಜನಾಥ್ ಸಿಂಗ್ ಗೆಲವಿಗೆ ದಾರಿ ಮಾಡಿಕೊಟ್ಟಿದ್ದಾರೆ.

ದಿಢೀರ್ ಬದಲಾವಣೆ: ಒಂದು ವರ್ಷದ ಹಿಂದೆಯೇ ಲಖನೌನಲ್ಲಿ ಬಾಜ್ಪೇಯಿ ಅವರನ್ನು ಕಣಕ್ಕಿಳಿಸುವುದಾಗಿ ಎಸ್ಪಿ ಘೋಷಿಸಿತ್ತು. ಅದರಂತೆ ಬಾಜ್ಪೇಯಿ ಅವರು ತಮ್ಮ ಪ್ರಚಾರವನ್ನೂ ಆರಂಭಿಸಿದ್ದರು. ಲಖನೌನ ಹಿಂದೂ ಹಾಗೂ ಮುಸ್ಲಿಂ ಸಮುದಾಯಕ್ಕೆ ಬಾಜ್ಪೇಯಿ ಪರ ಉತ್ತಮ ಭಾವನೆಯಿದೆ. ಹಾಗಾಗಿ ಅವರು ಇಲ್ಲಿ ಗೆಲವು ಸಾಧಿಸುವುದು ಖಚಿತ ಎಂದೇ ನಂಬಲಾಗಿತ್ತು. ಆದರೆ, ದಿಢೀರ್ ಬೆಳವಣಿಗೆಯೆಂಬಂತೆ ಎಸ್ಪಿ ಮುಖ್ಯಸ್ಥ ಮುಲಾಯಂ ಅವರು ಬಾಜ್ಪೇಯಿ ಅವರನ್ನು ಹಿಂಪಡೆದು, ಅವರ ಜಾಗಕ್ಕೆ ಪ್ರಭಾವಿಯಲ್ಲದ ಅಭಿಷೇಕ್ ಮಿಶ್ರಾರನ್ನು ಕಣಕ್ಕಿಳಿಸಿದ್ದಾರೆ. ಇದು ಸ್ವತಃ ಸಮಾಜವಾದಿ ಪಕ್ಷದ ವಲಯದಲ್ಲೂ ತೀವ್ರ ಅಚ್ಚರಿಗೆ ಕಾರಣವಾಗಿದೆ. ರಾಜನಾಥ್, ಮುಲಾಯಂರ ಹಳೆಯ ಸ್ನೇಹಿತರಾಗಿದ್ದು ಸುಲಭವಾಗಿ ಗೆಲವು ಸಾಧಿಸಲಿ ಎಂಬ ಉದ್ದೇಶದಿಂದ ಮುಲಾಯಂ ಈ 'ತ್ಯಾಗ' ಮಾಡಿದ್ದಾರೆ ಎನ್ನುವುದು ಹಲವರ ಅಭಿಪ್ರಾಯ.

ವೆಬ್ದುನಿಯಾವನ್ನು ಓದಿ