ಎಸ್ಸೆಂ ಕೃಷ್ಣ 'ಮತ್ತೊಬ್ಬ ಶಿವರಾಜ್ ಪಾಟೀಲ್': ಬಿಜೆಪಿ ಟೀಕೆ

ಶನಿವಾರ, 1 ಆಗಸ್ಟ್ 2009 (14:40 IST)
PTI
ಯುಪಿಎ ಸರಕಾರದ ವಿದೇಶಾಂಗ ನೀತಿಯ ಬಗ್ಗೆ ಕೆರಳಿ ಕೆಂಡವಾಗಿರುವ ಬಿಜೆಪಿ, ಗುರುವಾರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಮೇಲೆ ಹರಿಹಾಯ್ದಿದೆ. ಕೃಷ್ಣ ಕೈಯಲ್ಲಿ ದೇಶದ ವಿದೇಶಾಂಗ ನೀತಿ ಸುರಕ್ಷಿತವಾಗಿಲ್ಲ ಎಂದಿರುವ ಬಿಜೆಪಿ, ಅವರು ಮತ್ತೊಬ್ಬ ಶಿವರಾಜ್ ಪಾಟೀಲ್ ಆಗತೊಡಗಿದ್ದಾರೆ ಎಂದು ಕಟುವಾಗಿ ಟೀಕಿಸಿದೆ.

"ಕೃಷ್ಣ ಅವರು ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲ್‌ರಂತೆಯೇ ಆಗುತ್ತಿದ್ದಾರೆ. ಕೊನೆಗೆ ಪಾಟೀಲರನ್ನು ಕಾಂಗ್ರೆಸ್ ನಿವಾರಿಸಿಕೊಳ್ಳಬೇಕಾಗಿಬಂದಿತ್ತು. ಆದರೆ, ಕೃಷ್ಣರಿಗೆ ತಾವು ಮತ್ತೊಬ್ಬ ಶಿವರಾಜ್ ಪಾಟೀಲ್ ಎಂದು ತೋರಿಸಿಕೊಳ್ಳಲು ಹೆಚ್ಚು ಕಾಲ ಬೇಕಾಗಲಿಲ್ಲ ಎಂಬುದಷ್ಟೇ ವ್ಯತ್ಯಾಸ" ಎಂದು ಸರಕಾರದ ಉತ್ತರಕ್ಕೆ ಸಮಾಧಾನಗೊಳ್ಳದೆ ಸಭಾತ್ಯಾಗ ಮಾಡಿದ ಬಳಿಕ ಬಿಜೆಪಿ ನಾಯಕ ಯಶವಂತ ಸಿನ್ಹಾ ಅವರು ಸಂಸತ್ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಪಾಟೀಲರು ಗೃಹ ಸಚಿವಾಲಯವನ್ನು 'ಹಾಳು ಮಾಡಲು' ಸಾಕಷ್ಟು ಸಮಯ ತೆಗೆದುಕೊಂಡಿದ್ದರು, ಆದರೆ ಕೃಷ್ಣ ಅವರು ಕಡಿಮೆ ಅವಧಿಯಲ್ಲಿ ವಿದೇಶಾಂಗ ಸಚಿವಾಲಯಕ್ಕೆ ಅದೇ ಗತಿ ಕಾಣಿಸುತ್ತಾರೆ ಎಂದು ಸಿನ್ಹಾ ನಿಂದಿಸಿದರು.

ಭಾರತ-ಪಾಕ್ ಜಂಟಿ ಹೇಳಿಕೆ ಕುರಿತ ಚರ್ಚೆಗೆ ವಿದೇಶಾಂಗ ಸಚಿವರು ಉತ್ತರಿಸಿದ ರೀತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಕೊನೆಗೆ ವಿತ್ತ ಸಚಿವ ಪ್ರಣಬ್ ಮುಖರ್ಜಿ ಅವರು ಚರ್ಚೆಯಲ್ಲಿ ಮಧ್ಯಪ್ರವೇಶಿಸುವಂತೆ ಮಾಡಿದ್ದೇಕೆ ಎಂದು ಅಚ್ಚರಿ ವ್ಯಕ್ತಪಡಿಸಿದರು.

ವಿದೇಶಾಂಗ ಸಚಿವರಿರುವಾಗ ವಿತ್ತ ಸಚಿವರನ್ನು ಬಲವಂತವಾಗಿ ಮುಂದೆ ತಳ್ಳಿದ್ದು ಅತ್ಯಂತ ವಿಚಿತ್ರ ವಿದ್ಯಮಾನ ಎಂದ ಸಿನ್ಹಾ, ಪ್ರಧಾನಿ ಮತ್ತು ಮುಖರ್ಜಿ ಅವರು ಕೃಷ್ಣರ ಕೈಹಿಡಿದು ಮುನ್ನಡೆಸಲು ಯಾವಾಗಲೂ ಸದನದಲ್ಲೇನೂ ಇರುವುದಿಲ್ಲ ಎಂದೂ ಹೇಳಿದರು.

ವೆಬ್ದುನಿಯಾವನ್ನು ಓದಿ