ಓಬಳಾಪುರಂ ಗಣಿ: ಕ್ರಮಕ್ಕೆ ಒತ್ತಾಯಿಸಿ ಟಿಡಿಪಿ ಪ್ರತಿಭಟನೆ

ಸೋಮವಾರ, 16 ನವೆಂಬರ್ 2009 (13:27 IST)
PTI
ಕರ್ನಾಟಕದ ಪ್ರವಾಸೋದ್ಯಮ ಸಚಿವ ಜಿ. ಜನಾರ್ದನ ರೆಡ್ಡಿಯವರ ಓಬಳಾಪುರಂ ಗಣಿ ಕಂಪೆನಿಯು ಅನಂತಪುರ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದಾಗಿ ಆರೋಪಿಸಿರುವ ತೆಲುಗುದೇಶಂ ಈ ಕುರಿತು ಕ್ಷಿಪ್ರ ಕ್ರಮಕೈಗೊಳ್ಳುವಂತೆ ಹೈದರಾಬಾದಿನ ಗಾಂಧಿ ಪ್ರತಿಮೆ ಎದುರು ಸೋಮವಾರ ಪ್ರತಿಭಟನೆ ನಡೆಸಿದ್ದು ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿದೆ.

ಟಿಡಿಪಿ ಮತ್ತು ಇತರ ಮೂರು ಪಕ್ಷಗಳು, ಈ ಸಂಬಂಧ ತಕ್ಷಣ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಕೆ. ರೋಸಯ್ಯ ಅವರನ್ನು ಈ ಹಿಂದೆ ಒತ್ತಾಯಿಸಿದ್ದವು. ಈ ಮಧ್ಯೆ, ಸಿಪಿಐ(ಎಂ) ಪತ್ರಿಕಾಗೋಷ್ಠಿ ನಡೆಸಿದ್ದು, ಓಬುಳಾಪುರಂನ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿ ರೋಸಯ್ಯರನ್ನು ಒತ್ತಾಯಿಸಿದೆ.
NRB

ತೆಲುಗುದೇಶಂ ನಾಯಕ ಮತ್ತು ಆಂಧ್ರದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಸಿಪಿಎಂ ರಾಜ್ಯ ಕಾರ್ಯದರ್ಶಿ ಬಿ.ವಿ. ರಾಘವುಲು, ಸಿಪಿಐ ರಾಜ್ಯ ಕಾರ್ಯದರ್ಶಿ ಕೆ. ನಾರಾಯಣ, ಲೋಕಸತ್ತ ಪಕ್ಷದ ಅಧ್ಯಕ್ಷ ಮತ್ತು ಶಾಸಕ ಎನ್. ಜಯಪ್ರಕಾಶ್ ನಾರಾಯಣ್ ಅವರನ್ನೊಳಗೊಂಡ ನಿಯೋಗ ಭಾನುವಾರ ರೋಸಯ್ಯ ಅವರನ್ನು ಭೇಟಿಯಾಗಿ ಅಕ್ರಮ ಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿತ್ತು.

ಕರ್ನಾಟಕ ಸಚಿವರಿಂದ ನಡೆಯುತ್ತಿರುವ ಈ ಅಕ್ರಮ ಗಣಿಗಾರಿಕೆಯ ವಿರುದ್ಧ ಜಂಟಿ ಹೋರಾಟ ಹಮ್ಮಿಕೊಳ್ಳಲು ಈ ಪಕ್ಷಗಳು ಸಭೆ ನಡೆಸಿ ನಿರ್ಧರಿಸಿದ್ದವು. ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ನಾಯ್ಡು, "ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ನಡೆಸಿ ಎರಡೂ ರಾಜ್ಯಗಳ ನಡುವಿನ ಗಡಿಯನ್ನೇ ಬದಲಿಸಿದ್ದರೂ ಆಂಧ್ರ, ಕರ್ನಾಟಕ ಹಾಗೂ ಕೇಂದ್ರ ಸರ್ಕಾರಗಳು ಇದರ ವಿರುದ್ಧ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ದೂರಿದ್ದರು.

ವೆಬ್ದುನಿಯಾವನ್ನು ಓದಿ