ಓಬಿಸಿ ಕೋಟಾ: ಮುಂದಿನ ವಿಚಾರಣೆ ಆ.27ಕ್ಕೆ

ಮಂಗಳವಾರ, 31 ಜುಲೈ 2007 (15:12 IST)
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓಬಿಸಿ ವಿಭಾಗದವರಿಗೆ ಶೇ.27 ಮೀಸಲಾತಿಯನ್ನು ಅನುಷ್ಠಾನಗೊಳಿಸುವುದಕ್ಕೆ ವಿಧಿಸಲಾದ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಲು ಕೋರಿ ಕೇಂದ್ರ ಸರಕಾರವು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟು ಆಗಸ್ಟ್ 27ಕ್ಕೆ ಮುಂದೂಡಿದೆ.

ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ಮಂಗಳವಾರ ಕೇಂದ್ರದ ಅರ್ಜಿಯ ವಿಚಾರಣೆ ನಡೆಸಿದ ಸಂದರ್ಭದಲ್ಲಿ, ಕೇಂದ್ರದ ಅರ್ಜಿಯನ್ನು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ವಿಚಾರಣೆ ನಡೆಸಲಿದೆ ಎಂದು ತಿಳಿಸಿತು. ಈ ಪೀಠವು ಒಬಿಸಿಗಳಿಗೆ ಕೋಟಾ ಮೀಸಲಿಡುವ ವಿವಾದಾತ್ಮಕ ಕಾಯಿದೆಯ ಸಾಂವಿಧಾನಿಕ ಸಿಂಧುತ್ವದ ಕುರಿತು ಸಲ್ಲಿಸಲಾಗಿದ್ದ ಮುಖ್ಯ ಅರ್ಜಿಯನ್ನೂ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

ಓಬಿಸಿಗಳಿಗೆ ಮೀಸಲಾತಿ ಕಲ್ಪಿಸುವ ಕೇಂದ್ರೀಯ ಶೈಕ್ಷಣಿಕ ಸಂಸ್ಥೆಗಳ (ಪ್ರವೇಶ ಮೀಸಲಾತಿ) ಕಾಯಿದೆ-2006ನ ಸಾಂವಿಧಾನಿಕ ಮಾನ್ಯತೆಯ ಪರಿಶೀಲನೆಗೆ ನ್ಯಾಯಾಲಯವು ಈ ಹಿಂದೆ ಆಗಸ್ಟ್ 7ನ್ನು ನಿಗದಿಪಡಿಸಿತ್ತು.

ವೆಬ್ದುನಿಯಾವನ್ನು ಓದಿ