ಕರುಣಾನಿಧಿ ಪುತ್ರಿ ಕನಿಮೋಳಿಗೆ ರಾಜ್ಯಸಭಾ ಸದಸ್ಯತ್ವ ಕಗ್ಗಂಟು

ಶನಿವಾರ, 27 ಏಪ್ರಿಲ್ 2013 (12:45 IST)
PTI
ಕೆಲದಿನಗಳ ಹಿಂದಷ್ಟೆ ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್‌ ಪಡೆದಿದ್ದ ಡಿಎಂಕೆ ಮತ್ತೂಮ್ಮೆ ಸಂಕಷ್ಟಕ್ಕೆ ಸಿಲುಕಿದೆ. ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಪುತ್ರಿ ಕನಿಮೋಳಿ ಮತ್ತು ಹಿರಿಯ ನಾಯಕ ತಿರುಚಿ ಎನ್‌. ಸಿವ ಸೇರಿದಂತೆ ತಮಿಳುನಾಡಿನ ಒಟ್ಟು ಆರು ಮಂದಿ ರಾಜ್ಯಸಭಾ ಸದಸ್ಯತ್ವದಿಂದ ಜು. 24ರಂದು ನಿವೃತ್ತರಾಗಲಿದ್ದಾರೆ.

ಆದರೆ ತನ್ನ ಇಬ್ಬರು ಪ್ರಮುಖ ಸದಸ್ಯರನ್ನು ರಾಜ್ಯಸಭೆಗೆ ಮರು ಆಯ್ಕೆ ಮಾಡುವಷ್ಟು ಬಹುಮತ ಈಗ ಡಿಎಂಕೆ ಬಳಿಯಲ್ಲಿ ಇಲ್ಲ. ಹೀಗಾಗಿ ಕನಿ ಪುನರಾಯ್ಕೆ ಡೋಲಾಯಮಾನವಾಗಿದೆ.

2011ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಕೇವಲ 23 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ತಮಿಳುನಾಡು ವಿಧಾನ ಸಭೆಯಿಂದ ರಾಜ್ಯಭೆಗೆ ಆಯ್ಕೆಯಾಗಲು 34 ಸದಸ್ಯರ ಬೆಂಬಲ ಅಗತ್ಯ. ಆದರೆ, ಕನ್ನಿಮೋಳಿ ಅವರನ್ನು ರಾಜ್ಯಸಭೆಗೆ ಮರು ಆಯ್ಕೆ ಮಾಡುವುದಕ್ಕೂ ಡಿಎಂಕೆ 11 ಸದಸ್ಯರ ಕೊರತೆ ಎದುರಿಸುತ್ತಿದೆ. ಆದರೆ, ಇತರ ಪಕ್ಷಗಳು ಕನಿಮೊಳಿಗೆ ಬೆಂಬಲ ನೀಡಲು ನಿರಾಕರಿಸುತ್ತಿದ್ದಾರೆ.

ಡಿಎಂಕೆಯ ಇಬ್ಬರು ಸದಸ್ಯರ ಜತೆಗೆ ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ. ರಾಜಾ, ಎಐಎಡಿಎಂಕೆ ಮುಖಂಡ ಮೈತ್ರೇಯನ್‌, ತಮಿಳುನಾಡು ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜ್ಞಾನದೇಶಿಕನ್‌ ರಾಜ್ಯಸಭಾ ಸದಸ್ಯತ್ವದಿಂದ ನಿವೃತ್ತರಾಗಲಿದ್ದಾರೆ. ಇನ್ನೊಂದೆಡೆ ಡಿಎಂಕೆ ವಿರೋಧಿ ಎಐಎಡಿಎಂಕೆ 151 ಶಾಸಕರನ್ನು ಹೊಂದಿದ್ದು, ಕನಿಷ್ಠ ನಾಲ್ಕು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡುವ ಅವಕಾಶ ಹೊಂದಿದೆ. ಹಿಗಾಗಿ ಮೈತ್ರೇಯನ್‌ ಮರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಇದು ಡಿಎಂಕೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ವೆಬ್ದುನಿಯಾವನ್ನು ಓದಿ