ಕರುಣಾನಿಧಿ 2011ರಲ್ಲಿ ಮತ್ತೆ ಸಿಎಂ ಆಗ್ತಾರೆ: ಅಳಗಿರಿ ಭವಿಷ್ಯ

ಭಾನುವಾರ, 31 ಜನವರಿ 2010 (12:09 IST)
PTI
ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುವುದಾಗಿ ತಮಿಳುನಾಡಿನ ಡಿಎಂಕೆ ವರಿಷ್ಠ, ಹಾಲಿ ಮುಖ್ಯಮಂತ್ರಿ ಕರುಣಾನಿಧಿಯೇ ಸ್ವತಃ ಘೋಷಿಸಿದ್ದರು ಕೂಡ, ಮುಂಬರುವ 2011ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ನಂತರ ಕರುಣಾನಿಧಿಯೇ ಮತ್ತೆ ಮುಖ್ಯಮಂತ್ರಿ ಪಟ್ಟ ಅಲಂಕರಿಸಲಿದ್ದಾರೆ ಎಂದು ಹಿರಿಯ ಪುತ್ರ, ಕೇಂದ್ರ ಸಚಿವ ಎಂ.ಕೆ.ಅಳಗಿರಿ ಭವಿಷ್ಯ ನುಡಿದಿದ್ದಾರೆ.

2011ರಲ್ಲಿ ಕರುಣಾನಿಧಿ ಮತ್ತೆ ಮುಖ್ಯಮಂತ್ರಿಗಾದಿ ಅಲಂಕರಿಸಲಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ. ಸ್ವತಃ ಮುಖ್ಯಮಂತ್ರಿ ಕರುಣಾನಿಧಿಯೇ ತಾನು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ ನಂತರವೂ ಅಳಗಿರಿ ನೀಡಿದ ಈ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಈ ಮೊದಲು ಜೂನ್ ತಿಂಗಳಿನಲ್ಲಿ ಕೊಯಂಬತ್ತೂರಿನಲ್ಲಿ ನಡೆದ ತಮಿಳರ ಸಮ್ಮೇಳನ ಸಮಾರಂಭದಲ್ಲಿ, ತಾನು ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುವುದಾಗಿ ಕರುಣಾನಿಧಿ ಮುನ್ಸೂಚನೆ ನೀಡಿದ್ದರು. ಅಲ್ಲದೇ, ಇದೀಗ ಎರಡನೇ ಬಾರಿಯೂ ತಾನು ರಾಜಕೀಯ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ. ಆದರೆ ಅಳಗಿರಿಯವರು ತಮ್ಮ ತಂದೆ, ಹಾಲಿ ಮುಖ್ಯಮಂತ್ರಿ ಕರುಣಾನಿಧಿಯೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಅಳಗಿರಿ ದಕ್ಷಿಣ ತಮಿಳುನಾಡಿನ ಡಿಎಂಕೆಯ ಪ್ರಭಾವಿ ನಾಯಕ ಎಂದೇ ಪರಿಗಣಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ತನ್ನ ಕಿರಿಯ ಸೋದರ ಸ್ಟಾಲಿನ್ ಅವರು 2011ರ ವಿಧಾನಸಭಾ ಚುನಾವಣೆಯ ನೇತೃತ್ವ ವಹಿಸಿ, ಎದುರಾಳಿಗಳನ್ನು ಸೋಲಿಸಿ ಪಕ್ಷವನ್ನು ಮುನ್ನಡೆಸುತ್ತಾರೆ ಎಂದು ಅಳಗಿರಿ ವಿಶ್ವಾಸವ್ಯಕ್ತಪಡಿಸಿದ್ದಾರೆ.

ತಮ್ಮ 59ನೇ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಡಿಎಂಕೆ ವರಿಷ್ಠರಾದ ಕರುಣಾನಿಧಿ ಅವರ ಮಾರ್ಗದರ್ಶನದಲ್ಲಿ ನಾವೆಲ್ಲ ಒಗ್ಗಟ್ಟಾಗಿ ದುಡಿಯುವ ಮೂಲಕ ಡಿಎಂಕೆಯನ್ನು ಮತ್ತೆ ಅಧಿಕಾರಕ್ಕೆ ತರುವುದಾಗಿ ಹೇಳಿದರು.

ವೆಬ್ದುನಿಯಾವನ್ನು ಓದಿ