ಕಲ್ಲಿದ್ದಲು ಹಗರಣ : ಮೊಟ್ಟ ಮೊದಲ ಬಾರಿಗೆ ಸತ್ಯ ಬಿಚ್ಚಿಡಲಿದ್ದಾರೆ ಪ್ರಧಾನಿ?

ಶುಕ್ರವಾರ, 23 ಆಗಸ್ಟ್ 2013 (12:16 IST)
PTI
PTI
ಕಲ್ಲಿದ್ದಲು ಹಗರಣದ ಕಡತಗಳು ಎಲ್ಲಿ ಹೋದವು? ಇದಕ್ಕೆ ಪ್ರಧಾನಿಯೇ ನೇರವಾಗಿ ಉತ್ತರಿಸಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮನಮೋಹನ್‌ ಸಿಂಗ್ ಈ ಸಂಬಂಧ ಮಾತಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದನದ ಕಲಾಪದಲ್ಲಿ ಬೇರೆ ಯಾವುದೇ ವಿಷಯಗಳನ್ನು ಸಮರ್ಪಕವಾಗಿ ಚರ್ಚಿಸಲು ಸಾಧ್ಯವಾಗುತ್ತಿಲ್ಲ. ಸದನದ ಸಂಪೂರ್ಣ ಸಮಯವನ್ನು ಕಲ್ಲಿದ್ದಲು ಹಗರಣವೇ ನುಂಗಿ ಹಾಕುತ್ತಿದೆ. ಅಷ್ಟೆ ಅಲ್ಲ, ಕಲ್ಲಿದ್ದಲು ಹಗರಣದ ಕಡತಗಳು ನಾಪತ್ತೆಯಾಗಿರುವುದರ ಹಿಂದೆ ಪ್ರಧಾನಿ ಮನಮೋಹನ್‌ ಸಿಂಗ್‌ ಪಾಲು ಕೂಡ ಇದೆ. ಪ್ರಧಾನಿಯನ್ನು ರಕ್ಷಿಸುವ ಭರದಲ್ಲಿ ಕಲ್ಲಿದ್ದಲು ಸಚಿವ ಶ್ರೀಪ್ರಕಾಶ್‌ ಜೈಸ್ವಾಲ್‌ ಸೇರಿದಂತೆ ಎಲ್ಲರೂ ಈ ಕಲ್ಲಿದ್ದಲು ಹಗರಣದ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್‌ ಆರೋಪಿಸಿದ್ರು. ಪ್ರತಿಪಕ್ಷಗಳು ಕೂಡ ಸುಷ್ಮಾ ಸ್ವರಾಜ್‌ ಮಾತಿಗೆ ಬೆಂಬಲ ನೀಡಿದ್ದವು.

PTI
PTI
ಹೀಗಾಗಿ ಪ್ರಧಾನಿ ಈ ಎಲ್ಲಾ ಆರೋಪಗಳಿಂದ ಮುಕ್ತವಗಬೇಕಾದರೆ ಅವರು ಕಲ್ಲಿದ್ದಲು ಹಗರಣದ ಸಂಪೂರ್ಣ ಮಾಹಿತಿಯನ್ನು ಪ್ರತಿಪಕ್ಷಗಳಿಗೆ ನೀಡುವುದು ಅನಿವಾರ್ಯವಾಗಿದೆ. ಕಲ್ಲಿದ್ದಲು ಹಗರಣದ ಕಡತಗಳು ಎಲ್ಲಿ ಹೋದವು? ಕಲ್ಲಿದ್ದಲು ಹಗರಣದ ತನಿಖೆ ಹೇಗೆ ನಡೆಯುತ್ತಿದೆ? ಎಂಬುದರ ಬಗ್ಗೆ ಪ್ರಧಾನಿ ಮೊಟ್ಟ ಮೊದಲ ಬಾರಿಗೆ ನಾಳಿನ ರಾಜ್ಯಸಭಾ ಸದನದಲ್ಲಿ ಮಾತನಾಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ನಿಜವಾಗ್ಲೂ ಮಾತಾಡ್ತಾರೋ ಅಥವ ತಮ್ಮ ನಿರ್ಧಾರವನ್ನು ಏಕಾಏಕಿ ಬದಲಾಯಿಸಿ ಎಂದಿನಂತೆ ಸುಮ್ಮನೇ ಕೂತಿರ‍್ತಾರೋ ಹೇಳೋದಕ್ಕೆ ಆಗೋದಿಲ್ಲ. ಒಂದು ವೇಳೆ ಪ್ರಧಾನಿ ಮಾತಾಡಿದ್ದೇ ಆದರೆ, ಪ್ರಧಾನಿ ನೀಡುವ ಸಮಜಾಯಿಷಿಗೆ ಪ್ರತಿಪಕ್ಷಗಳು ಸುಮ್ಮನಾಗುತ್ತವೆಯೇ ಅಥವ ಪ್ರಧಾನಿ ಮಾತಿನಿಂದ ಕಲ್ಲಿದ್ದಲು ಹಗರಣದ ಬೆಂಕಿ ಇನ್ನಷ್ಟು ಹೆಚ್ಚಾಗುತ್ತದೆಯೇ ಎಂಬುದು ನಾಳೆ ತಿಳಿಯಲಿದೆ.

ವೆಬ್ದುನಿಯಾವನ್ನು ಓದಿ