ಕಳ್ಳನ ಎರಡು ಮುಖ : ಹಗಲಲ್ಲಿ ಎಂಎನ್‌ಸಿ ಕಂಪೆನಿಯ ಮ್ಯಾನೇಜರ್, ರಾತ್ರಿ ಹೊತ್ತಿನಲ್ಲಿ ಸರಗಳ್ಳ

ಬುಧವಾರ, 27 ನವೆಂಬರ್ 2013 (15:12 IST)
PR
ಕಿಡಿಗೇಡಿಗಳು ಮತ್ತು ಕಾಲೇಜು ತೊರೆದ ವಿದ್ಯಾರ್ಥಿಗಳು ಸರಗಳ್ಳತನದಲ್ಲಿ ಭಾಗಿಯಾಗಿರುವುದು ಸಾಮಾನ್ಯ. ಆದರೆ ಪೊಲೀಸರು ರವಿವಾರದಂದು ಬಂಧಿಸಿದ ಸರಗಳ್ಳ ಒಂದು ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪೆನಿಯ ಮ್ಯಾನೇಜರ್‌ ಹುದ್ದೆಯಲ್ಲಿರುವುದು ಕಂಡು ದಂಗಾಗಿದ್ದಾರೆ.

ಎಂಬಿಎ ಪದವೀಧರನಾದ ಸೈಯಕತ್ ಗವೈನ್ ಎನ್ನುವ ಆರೋಪಿ ಪ್ರತಿಷ್ಠಿತ ಕಂಪೆನಿಯಲ್ಲಿ ಆಪರೇಶ್ ಆನಲೈಸ್ಟ್ ಡೆವಲೆಪ್‌ಮೆಂಟ್ ಮ್ಯಾನೇಜರ್ ಹುದ್ದೆಯಲ್ಲಿದ್ದಾನೆ.

ಆರೋಪಿಯ ಮತ್ತೊಬ್ಬ ಸಹಚರ ಸೌನಕ್ ದತ್ತಾ 20 ವರ್ಷ ವಯಸ್ಸಿನವನಾಗಿದ್ದು, ನಗರದಲ್ಲಿರುವ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ.

ಉಭಯ ಆರೋಪಿಗಳು ಕನಿಷ್ಠ 12 ಸರಗಳ್ಳತನ ಪ್ರಕರಣದಲ್ಲಿ ಬಾಗಿಯಾಗಿದ್ದು, ಸುಮಾರು ಒಂದು ವರ್ಷದಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರು ಆರೋಪಿಗಳು ಕೋಲ್ಕತಾ ಮೂಲದವರಾಗಿದ್ದು, ಶ್ರೀಮಂತ ಕುಟುಂಬದ ಹಿನ್ನೆಲೆಯವರಾಗಿದ್ದಾರೆ. ಪಾರ್ಟಿಯೊಂದರಲ್ಲಿ ಪರಸ್ಪರ ಪರಿಚಯವಾದ ಆರೋಪಿಗಳು ಗೆಳೆಯರಾಗಿ ನಂತರ ಜೊತೆಯಾಗಿ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

PR
ಆರೋಪಿ ಮ್ಯಾನೇಜರ್ ಸೈಯಿಕತ್ ಮಾಸಿಕವಾಗಿ 25 ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದು, ಐಷಾರಾಮಿ ಜೀವನ ನಡೆಸಲು ಸರಗಳ್ಳತನಕ್ಕೆ ಕೈ ಹಾಕಿದ್ದಾನೆ. ಮುಂದಿನ ತಿಂಗಳು ಆತನ ವಿವಾಹಕ್ಕೆ ದಿನಾಂಕ ನಿಗದಿಪಡಿಸಲಾಗಿತ್ತು. ಮತ್ತೊಬ್ಬ ಆರೋಪಿ ಸೌನಕ್, ತನ್ನ ಶಿಕ್ಷಣದ ಸಾಲವನ್ನು ತೀರಿಸಲು ಕದ್ದ ಚಿನ್ನವನ್ನು ಆಭರಣಗಳ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಅಂದು ಅದೃಷ್ಠ ಕೈ ಕೊಟ್ಟಿತ್ತು. ಎಚ್‌ಆರ್‌ಬಿಆರ್ ಲೈಔಟ್‌ನ ಫಸ್ಟ್ ಬ್ಲಾಕ್‌ನಲ್ಲಿ ಹೊಂಚು ಹಾಕುತ್ತಿರುವಾಗ ಲಾವಣ್ಯ ಎನ್ನುವ ಮಹಿಳೆ ತನ್ನ ಪತಿಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿರುವುದನ್ನು ಕಂಡು ಹಿಂಬಾಲಿಸಿದ ಆರೋಪಿಗಳು ಓರಿಯಂಟಲ್ ಬ್ಯಾಂಕ್ ಹತ್ತಿರ ಚಿನ್ನದ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ. ಮಹಿಳೆ ಜೋರಾಗಿ ಕಿರುಚಿಕೊಂಡಿದ್ದರಿಂದ ಆರೋಪಿಗಳು ಪರಾರಿಯಾಗಿದ್ದಾರೆ.

ಪತ್ನಿಯನ್ನು ಕೆಳಗಿಳಿಸಿದ ಪತಿ ಆನಂದ್ ರೆಡ್ಡಿ, ಆರೋಪಿಗಳನ್ನು ಬೆನ್ನಟ್ಟಿದ್ದಾನೆ. ರಸ್ತೆಯಲ್ಲಿ ಬದಿಯಲ್ಲಿ ನಿಂತಿದ್ದ ಪೊಲೀಸರಿಗೆ ಕೂಡಾ ಮಾಹಿತಿ ನೀಡಿದ್ದರಿಂದ ಆರೋಪಿಗಳನ್ನು ಬಾಬಾಸಾಬ್ ಜಂಕ್ಷನ್ ಬಳಿ ಹಿಡಿದು ವಿಚಾರಣೆ ನಡೆಸಿದಾಗ ಸರಗಳ್ಳತನ ಎಸಗಿರುವುದು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ