ಕಾಂಗ್ರೆಸ್ಸಿಗರ ಹಗರಣಗಳ ಬಗ್ಗೆ ತನಿಖೆಯಾಗಲಿ:ಆಡ್ವಾಣಿ

ಶನಿವಾರ, 29 ಅಕ್ಟೋಬರ್ 2011 (12:26 IST)
PTI
ಕೇಂದ್ರದಲ್ಲಿ ಅಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ ಕೆಲವರನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಹಗರಣಗಳಲ್ಲಿ ಕೆಲ ಕಾಂಗ್ರೆಸ್ ನಾಯಕರು ಕೂಡಾ ಭಾಗಿಯಾಗಿರುವ ಬಗ್ಗೆ ಕೇಳಿಬರುತ್ತಿರುವುದರಿಂದ ಕೂಡಲೇ ತನಿಖೆಗೆ ಆದೇಶಿಸಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ.ಆಡ್ವಾಣಿ ಹೇಳಿದ್ದಾರೆ.

ಜನ ಚೇತನಾ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಆಡ್ವಾಣಿ, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಕಾಂಗ್ರೆಸ್ ಮುಖಂಡರ ಹಗರಣಗಳನ್ನು ಮುಚ್ಚಿಕೊಳ್ಳಲು ಇತರರ ವಿರುದ್ಧ ತನಿಖೆ ಮಾಡುವ ಬೆದರಿಕೆಯೊಡ್ಡುತ್ತಿದೆ. ಕಾಂಗ್ರೆಸ್ ನಾಯಕರ ಭ್ರಷ್ಟಾಚಾರ ಮತ್ತು ಹಗರಣಗಳ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಯುಪಿಎ ಮಿತ್ರಕೂಟ ಪಕ್ಷಗಳ ನಾಯಕರ ವಿರುದ್ಧ ತನಿಖೆ ನಡೆಸಿ ಶಿಕ್ಷೆ ವಿಧಿಸಲಾಗುತ್ತಿದೆ. ಆದರೆ, ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಭ್ರಷ್ಟ ನಾಯಕರನ್ನು ರಕ್ಷಿಸಲಾಗುತ್ತಿದೆ. ಇಲ್ಲಿಯವರೆಗೆ ಕಾಂಗ್ರೆಸ್ ನಾಯಕರ ವಿರುದ್ಧ ಯಾವುದೇ ರೀತಿಯ ತನಿಖೆ ನಡೆದಿಲ್ಲ ಎಂದು ವಿಷಾದಿಸಿದ್ದಾರೆ.

ಭಾರತದ ಸ್ವಾತಂತ್ರ್ಯ ನಂತರದ ಇತಿಹಾಸದಲ್ಲಿ ಕಳೆದ ಎರಡು ವರ್ಷಗಳಲ್ಲಿ ನಡೆದ ಭ್ರಷ್ಟಾಚಾರಗಳಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದೇವೆ. ಕೇಂದ್ರ ಸರಕಾರದ ಸಚಿವರು ಹಗರಣಗಳಿಂದಾಗಿ ತಿಹಾರ್ ಜೈಲಿನಲ್ಲಿದ್ದಾರೆ. ಮುಂಬರುವ ದಿನಗಳಲ್ಲಿ ಮತ್ತೆ ಯಾರು ಜೈಲಿಗೆ ಹೋಗುತ್ತಾರೆ ಎನ್ನುವ ಬಗ್ಗೆ ಚರ್ಚೆ ನಡೆದಿರುವುದು ವಿಷಾದದ ಸಂಗತಿಯಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ವ್ಯಂಗ್ಯವಾಡಿದ್ದಾರೆ.

ವೆಬ್ದುನಿಯಾವನ್ನು ಓದಿ