ಕಾಂಗ್ರೆಸ್ ಅಸಮಾಧಾನ ಸ್ಫೋಟ: ಗುರುದಾಸ ಕಾಮತ್ ರಾಜೀನಾಮೆ

ಮಂಗಳವಾರ, 12 ಜುಲೈ 2011 (20:05 IST)
2014ರ ಲೋಕಸಭಾ ಚುನಾವಣೆಗೆ ಮುನ್ನ ಇದು ಕೇಂದ್ರ ಸಂಪುಟದ ಕೊಟ್ಟ ಕೊನೆಯ ಪುನಾರಚನೆಯಾಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಅಚ್ಚರಿಯ ಹೇಳಿಕೆ ನೀಡಿದ ಬೆನ್ನಿಗೇ ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡಿರುವ ಕರ್ನಾಟಕ ಮೂಲದ ಮಹಾರಾಷ್ಟ್ರದ ಕಾಂಗ್ರೆಸಿಗ ಗುರುದಾಸ್ ಕಾಮತ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಿಗೆ ರವಾನಿಸಿದ್ದಾರೆ.

ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೇ ಬರುವುದಿಲ್ಲ ಎಂದು ಗುರುದಾಸ್ ಕಾಮತ್ ಈ ಹಿಂದೆ ಹೇಳಿದ್ದಾಗ, ಕಾಂಗ್ರೆಸ್ ಪಕ್ಷವು ಅವರಿಗೆ ಎಚ್ಚರಿಕೆ ಸಂದೇಶವನ್ನೂ ರವಾನಿಸಿದ್ದ ಕಾರಣ ಅವರು ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ತಮಗೆ ಸಂಪುಟ ದರ್ಜೆ ಸಿಗಲಿಲ್ಲ, ಬದಲಾಗಿ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಸ್ವಂತಂತ್ರ ಸಚಿವ ಪಟ್ಟ ನೀಡಲಾಗಿದೆ ಎಂಬ ಅಸಮಾಧಾನದಿಂದಾಗಿ ಅವರು ಈ ರಾಜೀನಾಮೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

ಆದರೆ ಈ ಕುರಿತು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಅವರು, ಯಾವುದೇ ಖಾತೆಯ ಬಗ್ಗೆ ತನಗೆ ಬೇಸರವಿಲ್ಲ. ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡುತ್ತಿದ್ದು, ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಹೇಳಿದ್ದಾರೆ ಕಾಮತ್. ಕಾಂಗ್ರೆಸ್ ಹಿರಿಯ ಮುಖಂಡರಾಗಿರುವ ಅವರು ಈ ಹಿಂದೆ ಗೃಹ ಖಾತೆ ರಾಜ್ಯ ಸಚಿವರಾಗಿ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

ಮತ್ತೊಬ್ಬ ಸಚಿವ, ಒರಿಸ್ಸಾದ ಶ್ರೀಕಾಂತ್ ಜೇನಾ ಕೂಡ ತಮಗೆ ಸಂಪುಟ ದರ್ಜೆ ನೀಡಿಲ್ಲವೆಂಬ ಬಗ್ಗೆ ಅಸಮಾಧಾನ ಹೊಂದಿದ್ದರು. ಈ ಕಾರಣಕ್ಕೆ ಪ್ರಮಾಣವಚನ ಸ್ವೀಕಾರಕ್ಕೂ ಬಂದಿರಲಿಲ್ಲ. ಅವರನ್ನು ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆಯ ಸ್ವತಂತ್ರ ಖಾತೆ ಸಚಿವರಾಗಿ ನೇಮಿಸಲಾಗಿತ್ತು.

ಕೊನೆಯ ಪುನಾರಚನೆ ಎಂದ ಪ್ರಧಾನಿ
11 ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭವು ಮಂಗಳವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಮನಮೋಹನ್ ಸಿಂಗ್, ನನ್ನ ಪ್ರಕಾರ, ಇದು ಚುನಾವಣೆಗೆ ಮುನ್ನ ಕೊನೆಯ ಸಂಪುಟ ಪುನಾರಚನೆ. ಇದನ್ನು ಆದಷ್ಟೂ ಸಮಗ್ರವಾಗಿ ರೂಪಿಸಲಾಗಿದೆ ಎಂದರು. ಆದರೆ, "ಸಮ್ಮಿಶ್ರ ರಾಜಕೀಯ ಧರ್ಮ"ದ ಅನುಸಾರ ಎರಡು ಸೀಟುಗಳನ್ನು ಇನ್ನೂ ಮಿತ್ರ ಪಕ್ಷವಾಗಿರುವ ಡಿಎಂಕೆಗೆ ಕಾಯ್ದಿಡಲಾಗಿದೆ ಎಂದು ಕೂಡ ಸ್ಪಷ್ಟಪಡಿಸಿದ್ದರು.

ಕೆಲವು ಸಚಿವರು ಅಸಮಾಧಾನಗೊಂಡಿದ್ದಾರಲ್ಲಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಖಾತೆಗಳ ಮರು ಹಂಚಿಕೆ ವೇಳೆ ಸಾಕಷ್ಟು ಸಮಸ್ಯೆಗಳು ಬರುವುದು ಸಹಜ. ಆದರೆ ದೇಶದ ಹಿತ ಮುಖ್ಯವಾಗಿಟ್ಟುಕೊಂಡು ಸಂಪುಟ ಪುನಾರಚಿಸಲಾಗಿದೆ ಎಂದರು.

ವೆಬ್ದುನಿಯಾವನ್ನು ಓದಿ