ಕಾಂಗ್ರೆಸ್ ಸಂಸದ, ಶಾಸಕರಿಂದ ದೇಣಿಗೆ: ಸೋನಿಯಾ

ಶನಿವಾರ, 22 ಜೂನ್ 2013 (14:16 IST)
PTI
ಉತ್ತರಖಂಡದ ಪ್ರವಾಹ ಪರಿಸ್ಥಿತಿಯಿಂದ ಸಂಭವಿಸಿದ ಅಪಾರ ಹಾನಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಎಲ್ಲ ಸಂಸದರು ಮತ್ತು ಶಾಸಕರು ತಮ್ಮ ಒಂದು ತಿಂಗಳ ಸಂಬಳವನ್ನು ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಬೇಕು ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಉತ್ತರ ಖಂಡದಲ್ಲಿ ಸುರಿದ ಮಹಾಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತಕ್ಕೆ ಸುಮಾರು 190 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿದ್ದರೂ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಹಲವು ಸಾವಿರ ದಾಟಬಹುದೆಂದು ಪ್ರತ್ಯಕ್ಷದರ್ಶಿಗಳು ಲೆಕ್ಕ ಹಾಕಿದ್ದಾರೆ.

ಪರಿಹಾರ ಕಾರ್ಯಗಳಿಗಾಗಿ, ಲೋಕಸಭೆ ಮತ್ತು ರಾಜ್ಯಸಭೆಯ ಕಾಂಗ್ರೆಸ್‌ ಸಂಸದರು ತಮ್ಮ ಒಂದು ತಿಂಗಳ ಸಂಬಳದ ಹೊರತಾಗಿ ಎಂಪಿಎಲ್‌ಎಡಿ ನಿಧಿಯಿಂದ 10 ಲಕ್ಷ ರೂಪಾಯಿ ಹೆಚ್ಚುವರಿ ದೇಣಿಗೆ ನೀಡಬೇಕು ಎಂದು ಸೋನಿಯಾ ಗಾಂಧಿ ನಿರ್ದೇಶಿಸಿರುವುದಾಗಿ ಪಕ್ಷದ ಸಂವಹನ ವಿಭಾಗದ ಅಜಯ್‌ ಮಾಕನ್‌ ಹೇಳಿದ್ದಾರೆ. ಪ್ರಸಕ್ತ ಲೋಕಸಭೆಯಲ್ಲಿ ಕಾಂಗ್ರೆಸ್‌ 203 ಸದಸ್ಯರನ್ನು ಹೊಂದಿದ್ದರೆ ರಾಜ್ಯಸಭೆಯಲ್ಲಿ 72 ಮಂದಿ ಸದಸ್ಯರನ್ನು ಹೊಂದಿದೆ.

ಪರಿಹಾರ ಕಾರ್ಯಗಳು ಇನ್ನಷ್ಟು ಚುರುಕಾಗಿ ನಡೆಯಲು ಕಾಂಗ್ರೆಸ್‌ ಪಕ್ಷದ ವತಿಯಿಂದ ಡೆಹ್ರಾಡೂನ್‌ನಲ್ಲಿ ಪಿಸಿಸಿ ಕಂಟ್ರೋಲ್‌ ರೂಮ್‌ ಸ್ಥಾಪಿಸಲಾಗಿದೆ. ನೆರೆಹಾನಿಗೀಡಾದ ಪ್ರದೇಶಗಳನ್ನು ಮತ್ತೆ ಸುಸ್ಥಿತಿಗೆ ತರಲು ಕನಿಷ್ಠ ಮೂರು ವರ್ಷಗಳು ಬೇಕಾಗಬಹುದು ಎಂದು ಹೇಳಲಾಗಿದೆ.

ಇದು ಈ ಶತಮಾನದ ಬಲು ದೊಡ್ಡ ದುರಂತ ಎಂದು ಕೃಷಿ ಸಚಿವ ಹರಕ್‌ ಸಿಂಗ್‌ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ