'ಕೇಜ್ರಿವಾಲ್ ಧರಣಿ ಕುಳಿತ ಸ್ಥಳದಲ್ಲೇ ಸರ್ಕಾರ ನಡೆಸ್ತಿದ್ದಾರೆ'

ಸೋಮವಾರ, 20 ಜನವರಿ 2014 (15:54 IST)
PR
PR
ಕೇಂದ್ರ ಗೃಹಸಚಿವಾಲಯದ ಎದುರು ಹತ್ತು ದಿನಗಳ ಪ್ರತಿಭಟನೆ ನೇತೃತ್ವ ವಹಿಸುವುದಾಗಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಇಂದು ತಿಳಿಸಿದ್ದಾರೆ. ಸಿಎಂ ಜತೆಗೆ ಇನ್ನೂ ಏಳು ಸಚಿವರು ಪ್ರತಿಭಟನೆಯಲ್ಲಿ ಜತೆಗೂಡಿದ್ದಾರೆ. ಕಾರ್ಯಕರ್ತರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಆದರೆ ಸರ್ಕಾರದ ಕೆಲಸ ಕಾರ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ತಮ್ಮ ಪ್ರತಿಭಟನೆಯ ಸ್ಥಳಕ್ಕೆ ಕಡತಗಳ ಕಂತೆಯನ್ನೇ ತಂದು ಹೇರಿಸುವುದಾಗಿ ತಿಳಿಸಿದ್ದಾರೆ. ದೆಹಲಿ ಪೊಲೀಸ್ ವ್ಯವಸ್ಥೆಯೇ ಒಂದು ರೀತಿಯಲ್ಲಿ ವಿಚಿತ್ರವಾಗಿದೆ. ದೆಹಲಿಯ ಮುಖ್ಯಮಂತ್ರಿ ಸೇರಿದಂತೆ ಸಚಿವರ ಆದೇಶಗಳನ್ನು ದೆಹಲಿ ಪೊಲೀಸರು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ.

ಏಕೆಂದರೆ ದೆಹಲಿ ಪೊಲೀಸರು ಗೃಹಸಚಿವಾಲಯದ ವ್ಯಾಪ್ತಿಗೆ ಬರುತ್ತಾರೆ. ಹಾಗಾದರೆ ಮುಖ್ಯಮಂತ್ರಿಗೆ ದೆಹಲಿ ಪೊಲೀಸರ ಮೇಲೆ ಹಿಡಿತವಿಲ್ಲವೇ? ಪೊಲೀಸರ ಮೇಲೆ ದೆಹಲಿ ಸರ್ಕಾರಕ್ಕೆ ಹಿಡಿತವಿಲ್ಲ ಎನ್ನುವುದು ಸೋಮನಾಥ್ ಭಾರ್ತಿ ಪ್ರಕರಣದಲ್ಲಿ ಸಾಬೀತಾಗಿದೆ. ವೇಶ್ಯಾವಾಟಿಕೆ ಮತ್ತು ಡ್ರಗ್ ಜಾಲವೊಂದರ ಮೇಲೆ ದಾಳಿ ಮಾಡುವಂತೆ ಕಾನೂನು ಸಚಿವ ಸೋಮನಾಥ್ ಭಾರ್ತಿ ದೆಹಲಿ ಪೊಲೀಸರಿಗೆ ಆದೇಶ ನೀಡಿದರೂ ಅವರು ಕ್ಯಾರೆ ಎನ್ನಲಿಲ್ಲ. ನಮಗೂ ನಿಮಗೂ ಸಂಬಂಧವಿಲ್ಲ ಎನ್ನುವಂತೆ ನಿರುಮ್ಮಳರಾಗಿ ಇದ್ದರು. ನಮಗೆ ವಾರಂಟ್ ಬಂದಿಲ್ಲವೆಂದು ಹೇಳಿ ಸುಮ್ಮನೇ ಕುಳಿತರು.

PR
PR
ಡ್ರಗ್ ಮಾಫಿಯಾ ಹತ್ತಿಕ್ಕುವಲ್ಲಿ ದೆಹಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಇಂದು ಆರೋಪಿಸಿದರು. ದೆಹಲಿ ಪೊಲೀಸರ ವಿರುದ್ಧ ಕೇಜ್ರಿವಾಲ್ ಇಂದು ವಾಗ್ದಾಳಿಗಳ ಸುರಿಮಳೆಯನ್ನು ಸುರಿಸಿದರು. ಐವರು ಪೊಲೀಸರನ್ನು ಅಮಾನತು ಮಾಡುವವರೆಗೆ ಧರಣಿ ಹಿಂತೆಗೆಯುವುದಿಲ್ಲ ಎಂದು ಹೇಳಿದರು. ಕೇಂದ್ರ ಗೃಹ ಸಚಿವ ಶಿಂಧೆ ಮಾತ್ರ ತನಿಖೆ ನಂತರವೇ ಅಮಾನತು ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಕೇಂದ್ರ ಸರ್ಕಾರದ ಹಿಡಿತದಲ್ಲಿರುವ ದೆಹಲಿ ಪೊಲೀಸ್ ಪಡೆ ತಮ್ಮ ನಿಯಂತ್ರಣದಲ್ಲಿ ಬರಬೇಕೆಂದು ಕೇಜ್ರಿವಾಲ್ ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರ ಗೃಹಸಚಿವಾಲಯದ ಮೂಲಕ ಪೊಲೀಸ್ ಪಡೆಯನ್ನು ನಿಯಂತ್ರಿಸುತ್ತಿದೆ.ಇದರಿಂದ ತಮ್ಮ ಆದೇಶಗಳಿಗೆ ದೆಹಲಿ ಪೊಲೀಸರು ಬೆಲೆ ಕೊಡುವುದಿಲ್ಲ ಎಂದು ಕೇಜ್ರಿವಾಲ್ ದೂರಿದರು.

ವೆಬ್ದುನಿಯಾವನ್ನು ಓದಿ