ಕೇದಾರನಾಥದಲ್ಲಿ ಯಾತ್ರಿಕರನ್ನು ಸುಲಿಗೆಗೈದ ಸ್ಥಳೀಯರು

ಬುಧವಾರ, 3 ಜುಲೈ 2013 (12:47 IST)
ಕೇದಾರನಾಥ ಮತ್ತು ಬದರಿನಾಥದಲ್ಲಿ ಸಿಕ್ಕಿ ಬಿದ್ದಿದ್ದ ಯಾತ್ರಿಕರನ್ನು ಟ್ಯಾಕ್ಸಿ ಚಾಲಕರು, ಹೊಟೇಲಿನವರು ಮತ್ತು ಸ್ಥಳೀಯ ಜನರು ಮಾತ್ರ ದೋಚಿದ್ದಲ್ಲ ಪಾರು ಮಾಡಲು ಹೋದ ಖಾಸಗಿ ಹೆಲಿಕಾಪ್ಟರುಗಳು ಕೂಡ ದೋಚಿವೆ.

ಯಾತ್ರಿಕರನ್ನು ಪಾರು ಮಾಡಲು ತರಿಸಲಾಗಿದ್ದ ಹೆಲಿಕಾಪ್ಟರುಗಳು ಬದರಿನಾಥ ಮತ್ತು ಕೇದಾರನಾಥದಲ್ಲಿ ಸಿಕ್ಕಿ ಬಿದ್ದಿದ್ದ ಯಾತ್ರಿಕರ ಬಂಧುಗಳಿಂದ ಲಕ್ಷಗಟ್ಟಲೆ ರೂಪಾಯಿ ಕಿತ್ತುಕೊಂಡಿರುವ ಆರೋಪದ ಬಗ್ಗೆ ಉತ್ತರಾಖಂಡ ಸರಕಾರ ತನಿಖೆಗೆ ಆದೇಶಿಸಿದೆ.

ಈ ಆರೋಪದ ಸತ್ಯಾಸತ್ಯತೆಯನ್ನು ಕಂಡುಕೊಳ್ಳುವ ಸಲುವಾಗಿ ವಾಯುಯಾನ ಇಲಾಖೆ ತನಿಖೆಗೆ ಆದೇಶಿಸಿದೆ ಎಂದು ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ಸುಭಾಶ್‌ ಕುಮಾರ್‌ ಹೇಳಿದ್ದಾರೆ.

ವಾಯುಯಾನ ಸಚಿವ ಅಜಿತ್‌ ಸಿಂಗ್‌ ಉತ್ತರಾಖಂಡದ ಮುಖ್ಯಮಂತ್ರಿ ವಿಜಯ್‌ ಬಹುಗುಣ ಅವರಿಗೆ ಖಾಸಗಿ ಹೆಲಿಕಾಪ್ಟರುಗಳು ಯಾತ್ರಿಕರ ಬಂಧುಗಳಿಂದ ಲಕ್ಷಗಟ್ಟಲೆ ಹಣ ಕಿತ್ತುಕೊಂಡಿರುವ ಬಗ್ಗೆ ವಿವರಣೆ ಕೇಳಿ ಪತ್ರ ಬರೆದಿದ್ದರು. ಈ ಪತ್ರವನ್ನು ಅನುಸರಿಸಿ ತನಿಖೆಗೆ ಆದೇಶಿಸಲಾಗಿದೆ. ಜೂ.16-17ರಂದು ದಿಢೀರ್‌ ಪ್ರಳಯ ಸಂಭವಿಸಿದಾಗ ಕೇದಾರನಾಥಕ್ಕೆ ಮೊದಲು ತಲುಪಿದ್ದು ಖಾಸಗಿ ಹೆಲಿಕಾಪ್ಟರುಗಳು.

ಚಾರ್‌ಧಾಮಗಳಿಗೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ 16 ಹೆಲಿಕಾಪ್ಟರುಗಳನ್ನು ಪ್ರಳಯದ ಬಳಿಕ ಯಾತ್ರಿಕರನ್ನು ಪಾರು ಮಾಡುವ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು.

ವೆಬ್ದುನಿಯಾವನ್ನು ಓದಿ