ಕೇರಳ ಯುವತಿಯ ಮೇಲೆ 40 ದಿನದಲ್ಲಿ 42 ಜನರಿಂದ ರೇಪ್‌

ಬುಧವಾರ, 2 ಜನವರಿ 2013 (13:00 IST)
PTI
40 ದಿನಗಳಲ್ಲಿ ಆಕೆಯ ಮೇಲೆ 42 ಜನ ಅತ್ಯಾಚಾಸವೆಸಗಿಬಿಟ್ಟಿದ್ದರು. ಎಲ್ಲರ ಪಾಲಿಗೆ ಆಕೆ ಕೇವಲ ಭೋಗದ ವಸ್ತುವಾಗಿ ಹೋಗಿದ್ದಳು. ಇಂದು ನನಗೆ, ನಾಳೆ ನಿನಗೆ ಎಂದು ಒಬ್ಬರು ಇನ್ನೊಬ್ಬರಿಗೆ ಆಕೆಯನ್ನು ಅಕ್ಷರಶಃ ಸರಕಿನಂತೆ ವರ್ಗಾಯಿಸಿಕೊಂಡಿದ್ದರು. ದೆಹಲಿಯಲ್ಲಿ ಇತ್ತೀಚೆಗೆ ಚಲಿಸುವ ಬಸ್‌ನಲ್ಲಿ ಅತ್ಯಾಚಾರ ನಡೆದಿದ್ದರೆ, 16 ವರ್ಷಗಳ ಹಿಂದೆ ಕೇರಳದಲ್ಲಿ ನಡೆದಿದ್ದ ಈ ಕ್ರೂರ ಘಟನೆಯಲ್ಲಿ ಅತ್ಯಾಚಾರಕ್ಕೆ ಒಳಗಾದ ಮಹಿಳೆಯನ್ನು ಇಡೀ ರಾಜ್ಯ ಸುತ್ತಿಸಲಾಗಿತ್ತು. ಪರಿಣಾಮ 40 ದಿನಗಳಲ್ಲಿ ಆಕೆ ನಡೆಯಲಾಗದ ಸ್ಥಿತಿ ತಲುಪಿದ್ದಳು.

ಇಂತಹ ಹೇಯ ಘಟನೆ ಬಳಿಕ ಮನೆಗೆ ತೆರಳ್ಳೋಣವೆಂದರೆ ಕೈಯಲ್ಲಿ ಕಾಸಿಲ್ಲ. ನಡೆದಾಡಲು ಶಕ್ತಿಯಿಲ್ಲ. ಘಟನೆ ಬಗ್ಗೆ ಬಾಯಿಬಿಟ್ಟರೆ ಹತ್ಯೆ ಮಾಡುವ ಎಚ್ಚರಿಕೆ. ಅಕ್ಷರಶಃ ಆಕೆಯದ್ದು ಯಾರಿಗೂ ಬೇಡದ ಸ್ಥಿತಿ. ಇನ್ನೂ ದುರಂತದ ವಿಷಯವೆಂದರೆ ಘಟನೆ ನಡೆದ 16 ವರ್ಷಗಳ ಬಳಿಕವೂ ಆಕೆಯದ್ದು ಅದೇ ಕಥೆ. ಇನ್ನೂ ಆಕೆಗೆ ನ್ಯಾಯ ಸಿಕ್ಕಿಲ್ಲ.

ಇದು 1996ರಲ್ಲಿ ಕೇರಳದ ಸೂರ್ಯನೆಲ್ಲಿ ಎಂಬಲ್ಲಿ ನಡೆದಿದ್ದ, ದೇಶ ಕಂಡ ಅತ್ಯಂತ ಕ್ರೂರ, ಅಮಾನವೀಯ ಅತ್ಯಾಚಾರ ಪ್ರಕರಣದ ಹಿನ್ನೆಲೆ. ಇತ್ತೀಚಿನ ದೆಹಲಿ ಪ್ರಕರಣದ ಹಿನ್ನೆಲೆಯಲ್ಲಿ ಕೇರಳದ ಈ ಮಹಿಳೆಗೆ ಇನ್ನಾದರೂ ನ್ಯಾಯ ದೊರಕಿಸಿಕೊಡಿ ಎಂಬ ಬೇಡಿಕೆ ಇದೀಗ ಎಲ್ಲೆಡೆಯಿಂದ ವ್ಯಕ್ತವಾಗಿದೆ.

ಪ್ರಕರಣ ಹಿನ್ನೆಲೆ:

16 ವರ್ಷಗಳ ಹಿಂದೆ ಕೇರಳದ ಇಡುಕ್ಕಿ ಜಿಲ್ಲೆಯ ಸೂರ್ಯನೆಲ್ಲಿ ಎಂಬಲ್ಲಿ 16 ವರ್ಷದ ಬಾಲಕಿಯನ್ನು ಬಸ್‌ ಕಂಡಕ್ಟರ್‌ ಒಬ್ಬ ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಇಷ್ಟಾದ ಬಳಿಕ ಆ ಬಾಲಕಿಯನ್ನು ಆತ ಒಬ್ಬ ಮಹಿಳೆ ಮತ್ತು ವೃತ್ತಿಯಲ್ಲಿ ವಕೀಲನಾಗಿದ್ದ ವ್ಯಕ್ತಿಯೊಬ್ಬನಿಗೆ ಹಸ್ತಾಂತರ ಮಾಡಿದ. ಅವರಿಬ್ಬರೂ ಆ ಬಾಲಕಿಯನ್ನು ಅಪ್ಪಟ ವೇಶ್ಯೆಯಂತೆ ಬಳಸಿಕೊಂಡರು. ಒಂದೂರಿನಿಂದ ಇನ್ನೊಂದೂರಿಗೆ ಕರೆದೊಯ್ದು ಪ್ರತಿಷ್ಠಿತರ ಹಾಸಿಗೆ ಮೇಲೆ ಬೀಳಿಸಿದರು. ಹೀಗೇ ಬರೋಬ್ಬರಿ 40 ದಿನ ಆಕೆಯ ಮೇಲೆ ಸತತವಾಗಿ ಅತ್ಯಾಚಾರ ನಡೆಯುತ್ತಲೇ ಹೋಯಿತು. ಇಷ್ಟು ದಿನಗಳಲ್ಲಿ ಏನಿಲ್ಲವೆಂದರೂ 42 ಜನ ಆಕೆಯ ಮೂಲಕ ತಮ್ಮ ಕಾಮದಹನ ಮಾಡಿಕೊಂಡಿದ್ದರು. ಅಷ್ಟು ಹೊತ್ತಿಗೆ ಆಕೆ ನಡೆಯಲೂ ಆಗದ ಸ್ಥಿತಿಗೆ ತಲುಪಿದ್ದಳು.

ಕೊನೆಗೊಂದು ದಿನ ಆಕೆಯನ್ನು ಯಾವುದೇ ಸ್ಥಳದಲ್ಲಿ ಬಿಟ್ಟು ಹೋಗಿದ್ದರು. ಊರಿಗೆ ತೆರಳಲೂ ದುಡ್ಡಿಲ್ಲದ ಸ್ಥಿತಿ ಆಕೆಗೆ. ಕೊನೆಗೆ ಹೇಗೋ ಬಡ ತಂದೆ ವಾಸಿಸುತ್ತಿದ್ದ ಸೂರ್ಯನೆಲ್ಲಿಗೆ ಬಂದು ತಲುಪಿದ್ದಳು ಆ ಬಾಲಕಿ. ಇಷ್ಟಾಗುವಷ್ಟರಲ್ಲಿ ಈ ವಿಷಯ ಮಾಧ್ಯಮಗಳ ಕೈಗೆ ಸಿಕ್ಕು ಭಾರೀ ಪ್ರಚಾರ ಪಡೆದುಕೊಂಡಿತ್ತು. ಒತ್ತಡಕ್ಕೆ ಸಿಕ್ಕ ಸರ್ಕಾರ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಿ ಪ್ರಕರಣದ ವಿಚಾರಣೆಗೆ ಅವಕಾಶ ಮಾಡಿಕೊಟ್ಟಿತ್ತು. ವಿಶೇಷ ನ್ಯಾಯಾಲಯ 2000ನೇ ಇಸವಿಯಲ್ಲಿ 35 ಜನರನ್ನು ಪ್ರಕರಣದಲ್ಲಿ ದೋಷಿಗಳು ಎಂದು ತೀರ್ಪು ನೀಡಿತ್ತು. ಇದನ್ನು ಆರೋಪಿಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದರು. ಆದರೆ 2005ರಲ್ಲಿ ಕೇರಳ ಹೈಕೋರ್ಟ್‌, ಎಲ್ಲಾ ದೋಷಿಗಳನ್ನು ಆರೋಪ ಮುಕ್ತಗೊಳಿಸಿ ತೀರ್ಪು ನೀಡಿತು. ಆದರೆ ವಕೀಲ ಧರ್ಮರಾಜನ್‌ ಅವರನ್ನು ಮಾತ್ರ ವೇಶ್ಯಾವೃತ್ತಿಗೆ ಸಹಕರಿಸಿದ ಆರೋಪದಲ್ಲಿ ದೋಷಿ ಎಂದು ಘೋಷಿಸಿತು.

ಇದರ ವಿರುದ್ಧ ಅತ್ಯಾಚಾರಪೀಡಿತೆ 2005ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಳು. ಆದರೆ ಇದುವರೆಗೆ ಆ ಅರ್ಜಿಯ ವಿಚಾರಣೆಯೇ ಆರಂಭವಾಗಿಲ್ಲ.

ವಂಚನೆ ಕೇಸು:

ಈ ನಡುವೆ ಅನುಕಂಪದ ಆಧಾರದ ಮೇಲೆ 2 ವರ್ಷಗಳ ಹಿಂದಷ್ಟೇ ಆಕೆಗೆ ಆದಾಯ ತೆರಿಗೆ ಇಲಾಖೆಯಲ್ಲಿ ಪ್ಯೂನ್‌ ಹುದ್ದೆ ನೀಡಲಾಗಿತ್ತು. ಆದರೆ 2012ರಲ್ಲಿ ಆಕೆಯ ವಿರುದ್ಧ 2 ಲಕ್ಷ ರೂ. ವಂಚನೆ ಆರೋಪ ಹೊರಿಸಿದ ಅಧಿಕಾರಿಗಳು ಆಕೆಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಕೆಲಸ ಹಿಂದೆಯೂ ಘಟನೆಯಲ್ಲಿ ಭಾಗಿಯಾಗಿದ್ದ ಪ್ರಮುಖ ರಾಜಕಾರಣಿಗಳ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದೆ. ಯುವತಿ ಜೀವನ ಹಳಿತಪ್ಪಿದ ರೈಲಿನಂತಾಗಿ ಹೋಗಿದೆ. ತನ್ನದಲ್ಲದ ತಪ್ಪಿಗೆ ಈಕೆ ಶಿಕ್ಷೆ ಅನುಭವಿಸುತ್ತಿದ್ದಾಳೆ.

ವೆಬ್ದುನಿಯಾವನ್ನು ಓದಿ