ಕೇರಳ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ಶೀಲಾ ದೀಕ್ಷಿತ್

ಮಂಗಳವಾರ, 11 ಮಾರ್ಚ್ 2014 (15:55 IST)
PTI
ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮಂಗಳವಾರ ಕೇರಳದ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಪ್ರಮಾಣ ವಚನವನ್ನು ಭೋಧಿಸಿದರು. ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಸಚಿವರು, ಸ್ಪೀಕರ್ ಜಿ ಕಾರ್ತಿಕೇಯನ್ ಮತ್ತು ಇತರ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ಆದರೆ ವಿರೋಧ ಪಕ್ಷದ ಮುಖಂಡರುಗಳು ಗೈರು ಹಾಜರಾಗಿದ್ದರು.

ಕೇರಳದ ಸಾಂಪ್ರದಾಯಿಕ ಶೈಲಿಯ ಬಟ್ಟೆ ಧರಿಸಿ ಮುಖ್ಯಮಂತ್ರಿ ಮತ್ತು ಇತರ ಪ್ರತಿಷ್ಠಿತರ ಜೊತೆಗೂಡಿ ಶೀಲಾ ದೀಕ್ಷಿತ್ ಸಮಾರಂಭಕ್ಕೆ ಆಗಮಿಸಿದರು. ಮುಖ್ಯ ಕಾರ್ಯದರ್ಶಿ ಈ. ಕೆ ಭರತ್ ಭೂಷಣ್ ರಾಜ್ಯಪಾಲರಾಗಿ ದೀಕ್ಷಿತ್ ನಿಯುಕ್ತಿ ಕುರಿತು ಸರಕಾರಿ ಆದೇಶ ಓದಿ ಹೇಳಿದರು. ವಚನ ಸ್ವೀಕಾರವಾದ ಕೂಡಲೇ, ಬ್ಯಾಂಡ್ ಮೂಲಕ ರಾಷ್ಟ್ರಗೀತೆ ನುಡಿಸಲಾಯಿತು. ತದನಂತರ ಶ್ರೀಮತಿ ದೀಕ್ಷಿತ್ ಮತ್ತು ಮುಖ್ಯ ನ್ಯಾಯಮೂರ್ತಿ ರಿಜಿಸ್ಟರ್‌ಗೆ ಸಹಿ ಮಾಡಿದರು.

1998- 2013ರವರೆಗೆ ಶೀಲಾ ದೀಕ್ಷಿತ್ ದೆಹಲಿ ಮುಖ್ಯಮಂತ್ರಿಯಾಗಿದ್ದರು. ನಿಖಿಲ್ ಕುಮಾರ್ ಕೇರಳದ ರಾಜ್ಯಪಾಲ ಸ್ಥಾನಕ್ಕೆ ರಾಜಿನಾಮೆ ನೀಡಿದ ಹಿನ್ನಲೆಯಲ್ಲಿ ಅವರ ಸ್ಥಾನಕ್ಕೆ ಶೀಲಾ ದೀಕ್ಷಿತ್ ಅವರನ್ನು ಕೇಂದ್ರ ಸರ್ಕಾರ ನೇಮಕಮಾಡಿದೆ. ಇತ್ತೀಚೆಗಷ್ಟೆ ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ದೀಕ್ಷಿತ್ ದಯನೀಯ ಸೋಲು ಕಂಡಿದ್ದರು.

ವೆಬ್ದುನಿಯಾವನ್ನು ಓದಿ