ಕೋಟಾ ಕೊಡದಿದ್ರೆ ಓಟ್ ಕೊಡಲ್ಲ: ಕಾಂಗ್ರೆಸ್‌ಗೆ ಮುಸ್ಲಿಮರ ಎಚ್ಚರಿಕೆ

ಮಂಗಳವಾರ, 25 ಅಕ್ಟೋಬರ್ 2011 (12:14 IST)
PTI
ಅಣ್ಣಾ ಹಜಾರೆ ತಂಡದಿಂದ ಪ್ರೇರಣೆ ಪಡೆದ ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಮುಸ್ಲಿಂ ಮತಗಳು ಬೇಕಾದಲ್ಲಿ, 'ದಲಿತ ಮುಸ್ಲಿಂ' ಕೋಟಾ ಜಾರಿಗೆ ತರುವಂತೆ ಮುಸ್ಲಿಂ ಸಂಘಟನೆಗಳು ಸರಕಾರವನ್ನು ಒತ್ತಾಯಿಸಿವೆ.

ಚಳಿಗಾಲದ ಅಧಿವೇಶನದಲ್ಲಿ ಸಶಕ್ತ ಲೋಕಪಾಲ ಮಸೂದೆಯನ್ನು ಜಾರಿಗೊಳಿಸಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ವಿಫಲವಾದಲ್ಲಿ, ಕಾಂಗ್ರೆಸ್ ಪಕ್ಷಕ್ಕೆ ಮತ ನೀಡದಂತೆ ಅಣ್ಣಾ ಹಜಾರೆ ತಂಡ ಪ್ರಚಾರ ಕಾರ್ಯ ಆರಂಭಿಸಿದೆ.

ಮತ್ತೊಂದೆಡೆ, ಮುಸ್ಲಿಮ್ ನಾಯಕರು ಮತ್ತು ಮೌಲ್ವಿಗಳನ್ನೊಳಗೊಂಡ ಮುಸ್ಲಿಂ ರಿಸರ್ವೇಶನ್ ಮೂವ್‌ಮೆಂಟ್(ಎಂಆರ್‌ಎಂ)ಚಳುವಳಿಯ ಮುಖಂಡರು ದಲಿತ ಮುಸ್ಲಿಮರಿಗಾಗಿ ಕೋಟಾ ಮೀಸಲಿಡುವಂತೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಕೋರಿವೆ. ಚಳಿಗಾಲದ ಅಧಿವೇಶನದಲ್ಲಿ ಮೀಸಲಾತಿ ಜಾರಿಗೊಳಿಸುವಂತೆ ವಿಶೇಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಮನವಿ ಮಾಡಿವೆ.

ಮುಸ್ಲಿಂ ರಿಸರ್ವೇಶನ್ ಮೂವ್‌ಮೆಂಟ್ ನಗರದಲ್ಲಿ ಸಮಾವೇಶವನ್ನು ಹಮ್ಮಿಕೊಂಡಿದ್ದು ರಾಜ್ಯಾಧ್ಯಂತ ಪ್ರತಿಭಟನೆಯನ್ನು ವಿಸ್ತರಿಸುವುದರಿಂದ ಕಾಂಗ್ರೆಸ್ ಪಕ್ಷದ ಚುನಾವಣಾ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷಗಳಿಗಿಂತ ಕಾಂಗ್ರೆಸ್ ಪಕ್ಷದ ವಿರುದ್ಧ ಎಂಆರ್‌ಎಂ ವಾಗ್ದಾಳಿ ಮುಂದುವರಿಸಿದೆ.

ಹಿಂದುಳಿದ ವರ್ಗಗಳ ಶೇ.27ರಷ್ಟು ಕೋಟಾದಡಿಯಲ್ಲಿ ಶೇ.9ರಷ್ಟು ಮುಸ್ಲಿಮರಿಗೆ ನೀಡಬೇಕು. ಇದರಿಂದ ಯಾವುದೇ ರೀತಿಯ ಕಾನೂನು ತೊಡಕು ಎದುರಾಗುವುದಿಲ್ಲ. ಮುಂದಿನ ವರ್ಷದ ಚುನಾವಣೆಯೊಳಗೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಎಂಆರ್‌ಎಂ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.

ರಂಗನಾಥ್ ಮಿಶ್ರಾ ಆಯೋಗದ ವರದಿಯನ್ನು ಜಾರಿಗೆ ತರುವುದಲ್ಲದೇ ದಲಿತರಿಗೆ ನೀಡುವಂತೆ ಸ್ಕಾಲರ್‌ಶಿಪ್ ಮತ್ತು ಶೂನ್ಯಶುಲ್ಕ ಮೀಸಲಾತಿಯನ್ನು ನೀಡಬೇಕು ಎಂದು ಒತ್ತಾಯಿಸಿದೆ.

ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಮುಸ್ಲಿಮರ ಮೀಸಲಾತಿ ಜಾರಿಗೆ ತರಬೇಕೆ ಅಥವಾ ಬೇಡವೆ ಎನ್ನುವುದನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟ ಸಂಗತಿ. ಆದರೆ, ಮುಸ್ಲಿಮರಿಗೆ ಮೀಸಲಾತಿ ನೀಡುವಂತೆ ಪ್ರಧಾನಿಯವರಿಗೆ ಮುಖ್ಯಮಂತ್ರಿ ಮಾಯಾವತಿ ಪತ್ರ ಬರೆದಿರುವುದಕ್ಕೆ ಧನ್ಯವಾದಗಳು ಎಂದು ಎಂಆರ್‌ಎಂ ಝಾಫರ್ಯಾಬ್ ಜಿಲಾನಿ ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಎಂಆರ್‌ಎಂ ಬೇಡಿಕೆಯನ್ನು ಈಗಾಗಲೇ ಬೆಂಬಲಿಸಿದ್ದಾರೆ. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಸಂಸದ ಮೊಹಮ್ಮದ್ ಅದೀಬ್ ಮಾತನಾಡಿ, ಯುಪಿಎ ಸರಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ಡಿಸೆಂಬರ್‌ವರೆಗೆ ತಾಳ್ಮೆಯಿಂದಿರುವಂತೆ ಎಂಆರ್‌ಎಂ ನಾಯಕರಿಗೆ ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ