ಗುಂಡಿನ ದಾಳಿ: ಆರೋಪ ತಳ್ಳಿ ಹಾಕಿದ ಪಾಕ್

ಗುರುವಾರ, 31 ಜುಲೈ 2008 (09:24 IST)
ಉತ್ತರ ಕಾಶ್ಮಿರದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಪಡೆಗಳು ಕದನ ವಿರಾಮವನ್ನು ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತಿವೆ ಎಂಬ ಭಾರತದ ಆರೋಪವನ್ನು ತಳ್ಳಿ ಹಾಕಿರುವ ಪಾಕಿಸ್ತಾನ ಹೊಸದಾಗಿ ಅಂತಹ ಯಾವುದೇ ಘಟನೆ ಸಂಭವಿಸಿಲ್ಲ ಮತ್ತು ಗಡಿಯಲ್ಲಿ ಶಾಂತ ವಾತಾವರಣವಿದೆ ಎಂದು ಹೇಳಿದೆ.

'ನಮ್ಮ ವರದಿಗಳ ಪ್ರಕಾರ ಇವತ್ತು ಗಡಿಯ ಯಾವುದೇ ಭಾಗದಲ್ಲೂ ಗುಂಡಿನ ಚಕಮಕಿ ನಡೆದಿಲ್ಲ' ಎಂದು ಪಾಕಿಸ್ತಾನ ಸೇನಾ ವಕ್ತಾರ ಮೇಜರ್ ಜನರಲ್ ಅತ್ತಾರ್ ಆಬ್ಬಾಸ್ ತಿಳಿಸಿದ್ದಾರೆ.

ಬಾರಮುಲ್ಲ ಜಿಲ್ಲೆಯ ನೌಗಾನ್ ಪ್ರದೇಶದ ಭಾರತೀಯ ಗಡಿ ಭದ್ರತಾ ಪಡೆಯ ನೆಲೆಗಳ ಮೇಲೆ ಪಾಕ್ ಪಡೆಗಳು ಮೊರ್ಟಲ್ ಶೆಲ್‌ಗಳಿಂದ ದಾಳಿ ನಡೆಸುತ್ತಿವೆ ಎಂದು ಭಾರತೀಯ ಸೇನೆ ಆರೋಪಿಸಿದ ಬಳಿಕ ನೀಡಿದ ಪ್ರತಿಕ್ರಿಯೆಯಲ್ಲಿ ಆಬ್ಬಾಸ್ ಈ ಮಾತನ್ನು ಹೇಳಿದ್ದಾರೆ.

ಸ್ಥಳೀಯ ಕಮಾಂಡರ್‌ಗಳಿಂದ ಈ ಬಗ್ಗೆ ಮಾಹಿತಿ ತರಿಸಿಕೊಂಡೇ ತಾನು ಈ ಸ್ಪಷ್ಟೀಕರಣ ನೀಡುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಭಾರತ ಗಡಿ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಈಗಾಗಲೇ ತನ್ನ ಕಳವಳ ವ್ಯಕ್ತಪಡಿಸಿದೆ.

ವೆಬ್ದುನಿಯಾವನ್ನು ಓದಿ