ಗುಜರಾತ್ ದಂಗೆ: ಸಲ್ಮಾನ್ ಖಾನ್, ಮೋದಿಗೆ ತಿರುಗೇಟು ನೀಡಿದ ನಿತೀಶ್ ಕುಮಾರ್

ಸೋಮವಾರ, 20 ಜನವರಿ 2014 (18:29 IST)
PTI
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಗುಜರಾತ್ ದಂಗೆಯ ಬಗ್ಗೆ ಕ್ಷಮೆಯಾಚಿಸುವ ಅಗತ್ಯವಿಲ್ಲ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ನೀಡಿರುವ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಬಿಹಾರ್ ಸಿಎಂ ನಿತೀಶ್ ಕುಮಾರ್ ಗುಜರಾತ ದಂಗೆ ಮರೆಯಲು ಅಥಾ ಕ್ಷಮಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿಯವರನ್ನು ಆಯ್ಕೆ ಮಾಡಿದ್ದರಿಂದ 17 ವರ್ಷಗಳ ಮೈತ್ರಿಯನ್ನು ಮುರಿದುಕೊಂಡ ನಿತೀಶ್ ಕುಮಾರ್, ಗುಜರಾತ್ ದಂಗೆಯ ರೂವಾರಿಯಾದ ಮೋದಿಯವರನ್ನು ಕೋಮು ಹಿಂಸಾಚಾರ ಗಲಭೆಯಲ್ಲಿ ಆರೋಪಿಯಾಗಿಸಬೇಕು ಎಂದು ಒತ್ತಾಯಿಸಿದರು.

ಕಳೆದ ತಿಂಗಳು, ಸುಪ್ರೀಂಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಿದ ಸಮಿತಿ ಮೋದಿಯವರನ್ನು ಆರೋಪ ಮುಕ್ತವಾಗಿಸಿರುವ ಬಗ್ಗೆ ಸ್ಥಳೀಯ ಕೋರ್ಟ್ ಎತ್ತಿ ಹಿಡಿದಿತ್ತು.

ಗುಜರಾತ್ ದಂಗೆ ಕುರಿತಂತೆ ಕೋರ್ಟ್ ನಿರಪರಾಧಿ ಎಂದು ಘೋಷಿಸಿದ್ದರಿಂದ ನರೇಂದ್ರ ಮೋದಿ ಕ್ಷಮೆಯಾಚಿಸುವ ಅಗತ್ಯವಿಲ್ಲ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಇತ್ತೀಚೆಗೆ ನೀಡಿದ ಸಂದರ್ಶನದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಗುಜರಾತ್ ದಂಗೆ ಮರೆಯುವಂತಹದಲ್ಲ ಮತ್ತು ಕ್ಷಮಿಸುವಂತಹದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ವಿರುದ್ಧ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿಕೆ ಬಿಹಾರ್‌ನಲ್ಲಿರುವ ಶೇ.15 ರಷ್ಟು ಮುಸ್ಲಿಮರ ಮತಗಳನ್ನು ಸೆಳೆಯುವ ತಂತ್ರವಾಗಿದೆ ಎಂದು ಬಿಜೆಪಿ ಟೀಕಿಸಿದೆ.

ವೆಬ್ದುನಿಯಾವನ್ನು ಓದಿ