ಗೆಳತಿಯರಿಂದಲೇ ಬ್ಲ್ಯಾಕ್‌ಮೇಲ್: ನೇಣಿಗೆ ಶರಣಾದ ವಿದ್ಯಾರ್ಥಿನಿ

ಗುರುವಾರ, 26 ಸೆಪ್ಟಂಬರ್ 2013 (13:51 IST)
WD
ದೆಹಲಿ ಮೂಲದ ಯುವತಿಯರ ಬ್ಲ್ಯಾಕ್‌ಮೇಲ್‌ ಸಹಿಸದ 18 ವರ್ಷ ವಯಸ್ಸಿನ ಕಾಲೇಜಿನ ವಿದ್ಯಾರ್ಥಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ.

ತನ್ನದೇ ಆದ ಕೆಲ ವಿಡಿಯೋ ಕ್ಲಿಪ್‌‌ಗಳನ್ನು ತೋರಿಸಿ ದೆಹಲಿ ಮತ್ತು ರೋಹ್ಟಕ್ ಮೂಲದ ಗೆಳತಿಯರು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂದು ರೋಹ್ಟಕ್ ಜಿಲ್ಲೆಯ ಬಲಿಯಾನಾ ಗ್ರಾಮದ ನಿವಾಸಿಯಾಗಿದ್ದ ಮೋನಿಕಾ ನೇಣಿಗೆ ಶರಣಾಗುವ ಮುನ್ನ ಪತ್ರದಲ್ಲಿ ಬರೆದಿದ್ದಾಳೆ. ಆದರೆ ಯಾವ ರೀತಿಯ ವಿಡಿಯೋ ಸಿಡಿಗಳಿದ್ದವು ಎನ್ನುವ ಬಗ್ಗೆ ಪತ್ರದಲ್ಲಿ ಉಲ್ಲೇಖವಿಲ್ಲ.

ನಗರದ ಖಾಸಗಿ ಸಂಸ್ಥೆಯಲ್ಲಿ ಕಂಪ್ಯೂಟರ್ ಕೋರ್ಸ್ ಓದುತ್ತಿದ್ದ ಯುವತಿ ಮೋನಿಕಾ ಸತ್ತು ಐದು ದಿನಗಳ ನಂತರ ಆಕೆಯ ತಂದೆಗೆ ಪತ್ರವೊಂದು ದೊರೆತಿದೆ. ಪತ್ರದ ಸಾರಾಂಶದಂತೆ ಅಪರಿಚಿತ ಯುವತಿಯರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಹಫ್ತಾ ವಸೂಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಯುವತಿಯೊಬ್ಬಳ ಭಾವಚಿತ್ರಕ್ಕೆ ನನ್ನ ಭಾವಚಿತ್ರ ಅಂಟಿಸಿ ವಿಡಿಯೋಗಳನ್ನು ದೆಹಲಿ ಮೂಲದ ಯುವತಿಯರು ಸಿದ್ದಪಡಿಸಿದ್ದರು. ವಿಡಿಯೋ ಬೇಕಾದಲ್ಲಿ 5 ಲಕ್ಷ ರೂಪಾಯಿಗಳನ್ನು ನೀಡಬೇಕು ಇಲ್ಲವಾದಲ್ಲಿ ಇಂಟರ್‌ನೆಟ್‌ನಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು. ನನ್ನಂತಹ ಮಧ್ಯಮ ವರ್ಗದ ಕುಟುಂಬಕ್ಕೆ ಹಣ ನೀಡಲು ಸಾಧ್ಯವಿಲ್ಲವಾದ್ದರಿಂದ ಸಾವಿಗೆ ಶರಣಾಗುತ್ತಿದ್ದೇನೆ ಎಂದು ತಿಳಿಸಿದ್ದಾಳೆ.

ದೆಹಲಿ ಯುವತಿಯರು ಇದೇ ರೀತಿ ಬೆದರಿಸಿ ರೋಹ್ಟಕ್ ಮೂಲದ ಯುವತಿಯಿಂದ 10 ಲಕ್ಷ ಮತ್ತು ಮತ್ತೊಬ್ಬ ಯುವತಿಯಿಂದ 5 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ