ಗೇಮ್ಸ್ ಹಗರಣ; ಸುರೇಶ್ ಕಲ್ಮಾಡಿ ಸನಿಹದಲ್ಲಿದೆ ಸಿಬಿಐ

ಮಂಗಳವಾರ, 30 ನವೆಂಬರ್ 2010 (13:49 IST)
ಕಾಮನ್‌ವೆಲ್ತ್ ಗೇಮ್ಸ್ ಸಂಘಟನಾ ಸಮಿತಿಯ ಅಧ್ಯಕ್ಷ ಸುರೇಶ್ ಕಲ್ಮಾಡಿ ತಿಂದು ತೇಗುತ್ತಿದ್ದಾಗ ಸುಮ್ಮನಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಈಗ ಕುಣಿಕೆಯನ್ನು ಬಿಗಿಗೊಳಿಸುತ್ತಿದೆ. ತನಿಖಾ ಸಂಸ್ಥೆ ಸಿಬಿಐ ಕಲ್ಮಾಡಿ ಆಪ್ತರಾದ ಲಲಿತ್ ಭಾನೊಟ್ ಮತ್ತು ವಿ.ಕೆ. ವರ್ಮಾರ ಕಚೇರಿಗಳು ಮತ್ತು ಮನೆಗಳ ಮೇಲೆ ದಾಳಿ ನಡೆಸಿದ ನಂತರ ಎಫ್ಐಆರ್ ದಾಖಲಿಸಿರುವುದೇ ಇದಕ್ಕೆ ಸಿಕ್ಕಿರುವ ಸದ್ಯದ ಸಾಕ್ಷಿ.

ಕಾಮನ್‌ವೆಲ್ತ್ ಗೇಮ್ಸ್ ಆಯೋಜನೆಯಲ್ಲಿ ನಡೆದಿರುವ ಬಹುಕೋಟಿ ಹಗರಣಗಳ ಸಂಬಂಧ ಸಿಬಿಐ ಅಧಿಕಾರಿಗಳು ಸಂಘಟನಾ ಸಮಿತಿಯ ಪ್ರಧಾನ ಕಚೇರಿಯ ಮೇಲೂ ದಾಳಿ ನಡೆಸಿದ್ದಾರೆ. ಬಳಿಕ ಭನೋಟ್ ಮತ್ತು ವರ್ಮಾ ಅವರ ಮೇಲೆ ವಂಚನೆ, ನಕಲಿ ದಾಖಲೆ ಸೃಷ್ಟಿ ಮತ್ತು ಕ್ರಿಮಿನಲ್ ಪಿತೂರಿಗಳ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.

ಸಿಬಿಐ ಮೂಲಗಳ ಪ್ರಕಾರ, ತನಿಖಾ ಸಂಸ್ಥೆಯು ದೆಹಲಿ, ನೋಯ್ಡಾ ಮತ್ತು ಗುರ್ಗಾಂಗ್‌ಗಳಲ್ಲಿನ 11 ಕಡೆ ದಾಳಿಗಳನ್ನು ನಡೆಸಿ ಪರಿಶೀಲನೆ ನಡೆಸುತ್ತಿದೆ. ಟೈಮ್ ಸ್ಕೋರಿಂಗ್ ಬೋರ್ಡ್ ಖರೀದಿಯಲ್ಲಿ ನಡೆದಿರುವ ಅವ್ಯವಹಾರದ ಕುರಿತು ತನಿಖೆ ನಡೆಸುತ್ತಿದೆ. ಈ ಪರಿಶೀಲನೆಗಳು ಮುಕ್ತಾಯಗೊಂಡ ನಂತರ ವಿವರಣೆ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಟೈಮ್ ಸ್ಕೋರಿಂಗ್ ಬೋರ್ಡ್ ಒದಗಿಸಲು ಸಂಘಟನಾ ಸಮಿತಿಯು 107 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಕಂಪನಿಯೊಂದಕ್ಕೆ ನೀಡಿರುವ ಪ್ರಕರಣದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ನಿಟ್ಟಿನಲ್ಲಿ ಪ್ರಸಕ್ತ ಸಿಬಿಐ ತನಿಖೆ ನಡೆಸುತ್ತಿದೆ.

2009ರಲ್ಲಿ ಲಂಡನ್‌ನಲ್ಲಿ ನಡೆದಿದ್ದ ಕ್ವೀನ್ಸ್ ಬ್ಯಾಟನ್ ರಿಲೇಯಲ್ಲಿನ ಭ್ರಷ್ಟಾಚಾರದ ಸಂಬಂಧ ಕಲ್ಮಾಡಿ ಆಪ್ತ ವರ್ಮಾನನ್ನು ಕಳೆದ ತಿಂಗಳಷ್ಟೇ ಜಾರಿ ನಿರ್ದೇಶನಾಲಯವು ವಿಚಾರಣೆಗೊಳಪಡಿಸಿತ್ತು. ಕಲ್ಮಾಡಿಯ ಇತರ ಮೂವರು ಆಪ್ತರಾದ ಟಿ.ಎಸ್. ದರ್ಬಾರಿ, ಸಂಜಯ್ ಮೊಹಿಂದ್ರೂ ಮತ್ತು ಎಂ. ಜಯಚಂದ್ರನ್ ಇದೇ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ.

ಇಷ್ಟೆಲ್ಲ ಆರೋಪಗಳಿದ್ದರೂ ಕಲ್ಮಾಡಿ ತನ್ನ ಹಿಂದಿನ ಹೇಳಿಕೆಯನ್ನು ಪುನರುಚ್ಛರಿಸಿದ್ದಾರೆ. ತಾನು ಯಾವುದೇ ತಪ್ಪು ಮಾಡಿಲ್ಲ, ಸಿಬಿಐ ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಸಿದ್ಧನಿದ್ದೇನೆ ಎಂದು ಹೇಳುತ್ತಿದ್ದಾರೆ.

ಆದರೆ ಸಿಬಿಐ ಇನ್ನೂ ಕಲ್ಮಾಡಿಯವರನ್ನು ಪ್ರಶ್ನಿಸುವ ವಿಚಾರಕ್ಕೆ ಮುಂದಾಗಿಲ್ಲ. ಮೂಲಗಳ ಪ್ರಕಾರ ಆಪ್ತರನ್ನು ಬಲೆಗೆ ಕೆಡವಿದ ನಂತರವಷ್ಟೇ ಕಲ್ಮಾಡಿಯವರನ್ನು ಗುರಿ ಮಾಡಲಾಗುತ್ತದೆ. ಒತ್ತಡ ತಂತ್ರ ಬಳಸಿ ಕಾರ್ಯ ಸಾಧನೆ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ