ಗೌರವಗಳು ಪರಿಹಾರವಲ್ಲ, ಕಸಬ್‌ ಸಾಯಲೇಬೇಕು: ಓಂಬಳೆ ಪುತ್ರಿ

ಶುಕ್ರವಾರ, 30 ಏಪ್ರಿಲ್ 2010 (16:04 IST)
ಮುಂಬೈ ಭಯೋತ್ಪಾದಕರ ದಾಳಿ ಸಂದರ್ಭದಲ್ಲಿ ಪ್ರಾಣವನ್ನೇ ಪಣ್ಕಕಿಟ್ಟು ಹೋರಾಡಿದ ಸಹಾಯಕ ಪೊಲೀಸ್ ಸಬ್‌-ಇನ್ಸ್‌ಪೆಕ್ಟರ್ ತುಕರಾಂ ಓಂಬಳೆಯವರನ್ನು ಹುತಾತ್ಮ, ಮಹಾತ್ಮ ಎಂದೆಲ್ಲಾ ಹಾಡಿ-ಹೊಗಳಿರುವುದರಿಂದ ಸಾಂತ್ವನ ಪಡೆದುಕೊಳ್ಳದ ಅವರ ಕುಟುಂಬ ಪಾಕಿಸ್ತಾನಿ ಹಂತಕ ಅಜ್ಮಲ್ ಕಸಬ್‌ನನ್ನು ನೇಣಿಗೆ ಹಾಕುವುದನ್ನು ಎದುರು ನೋಡುತ್ತಿದೆ.

ಇನ್ನೇನು ಮೂರು ದಿನದಲ್ಲಿ ಮುಂಬೈ ದಾಳಿಯ ಸಂಬಂಧ ಜೀವಂತ ಸೆರೆ ಸಿಕ್ಕಿರುವ ಏಕೈಕ ಉಗ್ರ ಕಸಬ್ ಕುರಿತ ತೀರ್ಪನ್ನು ವಿಶೇಷ ನ್ಯಾಯಾಲಯ ಹೊರ ಹಾಕಲಿದ್ದು, ನರಹಂತಕನಿಗೆ ಮರಣ ದಂಡನೆ ಘೋಷಣೆಯಾಗಬಹುದು ಎನ್ನುವುದು ಓಂಬಳೆ ಕುಟುಂಬದ ನಿರೀಕ್ಷೆ. ಯಾವುದೇ ಕಾರಣಕ್ಕೂ ತನ್ನ ಕುಟುಂಬವು ಆತನನ್ನು ಕ್ಷಮಿಸುವುದಿಲ್ಲ ಎಂದು ಓಂಬಳೆಯವರ ಪುತ್ರಿ 23ರ ಹರೆಯದ ವೈಶಾಲಿ ಓಂಬಳೆ ಹೇಳಿದ್ದಾರೆ.

ಈ ಘನತೆ-ಗೌರವ-ಬಿರುದುಗಳು ನಮಗೆ ಸಂತಸ ತಂದಿಲ್ಲ. ನಾನು, ನನ್ನ ಕುಟುಂಬ ಮತ್ತು ಭಾರತೀಯರು ಕಸಬ್‌ನನ್ನು ಗಲ್ಲಿಗೇರಿಸುವುದನ್ನು ಬಯಸುತ್ತಿದ್ದಾರೆ. ಇದೇ ನಮಗೆ ಮುಖ್ಯವಾದ ವಿಚಾರ ಎಂದು ತಂದೆಗೆ ಮರಣೋತ್ತರವಾಗಿ ನೀಡಲಾದ 'ಅಶೋಕ ಚಕ್ರ'ವನ್ನು ನೋಡುತ್ತಾ ಪುತ್ರಿ ತಿಳಿಸಿದ್ದಾರೆ.

ಕಸಬ್ ತಪ್ಪಿತಸ್ಥನೆಂದು ಸಾಬೀತಾದರೆ ಅಫ್ಜಲ್ ಗುರು ಪ್ರಕರಣದಂತೆ ವಿಳಂಬ ನೀತಿಯನ್ನು ಅನುಸರಿಸದೆ ಆತನನ್ನು ಸರಕಾರವು ಗಲ್ಲಿಗೇರಿಸುತ್ತದೆ ಎಂಬ ಭರವಸೆ ನನ್ನಲ್ಲಿದೆ ಎಂದಿರುವ ವೈಶಾಲಿ, ನನ್ನ ತಂದೆ ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂಬ ವಾಸ್ತವವನ್ನು ಒಪ್ಪಿಕೊಂಡಿಲ್ಲ ಎಂದಿದ್ದಾರೆ.

ಪ್ರಸಕ್ತ ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡುತ್ತಿರುವ ಓಂಬಳೆ ಪುತ್ರಿ ದುರ್ಘಟನೆ ನಡೆದ ದಿನ ರಾತ್ರಿ ತಂದೆಯ ಜತೆ ಮಾತನಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. ನಾನು ಚೆನ್ನಾಗಿದ್ದೇನೆ, ನೀನೇನೂ ಚಿಂತೆ ಮಾಡಬೇಡ ಎಂದು ತಂದೆ ಹೇಳಿದ್ದನ್ನು ಸ್ಮರಿಸಿಕೊಂಡು ಬಿಕ್ಕುತ್ತಾರೆ.

ಮುಂಬೈ ಭಯೋತ್ಪಾದನಾ ದಾಳಿಯ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಿರುವ ಮುಂಬೈ ವಿಶೇಷ ನ್ಯಾಯಾಲಯವು ಮೇ 3ರಂದು ಕಸಬ್‌ ಕುರಿತು ಮಹತ್ವದ ತೀರ್ಪು ನೀಡಲಿದೆ.

ಇದು ಓಂಬಳೆಯವರ ಸಾಹಸ...
ಇಬ್ಬರು ಭಯೋತ್ಪಾದಕರು ಸ್ಕೋಡಾ ಕಾರೊಂದನ್ನು ಅಪಹರಿಸಿ ಗಿರ್ಗಾಂ ಚೌಪಾಟಿಯತ್ತ ಬರುತ್ತಿದ್ದಾರೆ ಎಂಬ ಅನಿರೀಕ್ಷಿತ ಸಂದೇಶ ನವೆಂಬರ್ 27ರ ಮಧ್ಯರಾತ್ರಿ 12.45ರ ಹೊತ್ತಿಗೆ ಓಂಬಳೆಯವರಿಗೆ ಬಂದಾಗ ಅವರಲ್ಲಿ ಯಾವುದೇ ಶಸ್ತ್ರಾಸ್ತ್ರ ಇರಲಿಲ್ಲ. ಅಷ್ಟರಲ್ಲಿ ಅವರೆದರೇ ಉಗ್ರರಿದ್ದ ಕಾರು ಹೋದದ್ದನ್ನು ಕಂಡು ಸುಮ್ಮನಾಗದ ಅವರು ತನ್ನ ಬೈಕನ್ನೇರಿ ಬೆಂಬತ್ತಿದ್ದರು.

ಅತ್ತ ಪೊಲೀಸರ ಮತ್ತೊಂದು ತಂಡವು ಡಿಬಿ ಮಾರ್ಗ್ ಬಳಿ ರಸ್ತೆಗೆ ಬ್ಯಾರಿಕೇಡ್ ಹಾಕಿ ಉಗ್ರರಿಗೆ ಕಾಯುತ್ತಿತ್ತು. ಪೊಲೀಸರನ್ನು ನೋಡುತ್ತಲೇ ಕಾರಿನೊಳಗಿದ್ದ ಇಬ್ಬರು ಭಯೋತ್ಪಾದಕರು ಗುಂಡಿನ ಮಳೆಗರೆದಿದ್ದರು. ಆದರೆ ಎದುರು ಬ್ಯಾರಿಕೇಡ್ ಇದ್ದ ಕಾರಣ ತಮ್ಮ ಕಾರನ್ನು ಅವರು ನಿಲ್ಲಿಸಿದ್ದರು. ಅಷ್ಟರಲ್ಲಾಗಲೇ ಕಾರಿನ ಮುಂದಕ್ಕೆ ಹೋಗಿದ್ದ ಓಂಬಳೆಯವರು ಪೊಲೀಸರತ್ತ ಗುಂಡು ಹಾರಿಸುತ್ತಿದ್ದ ಕಸಬ್‌ನನ್ನು ಬರಿಗೈಯಲ್ಲೇ ತಡೆಯಲು ಹೋಗಿದ್ದರು.

ನೇರವಾಗಿ ಓಂಬಳೆಯವರ ಮೇಲೆ ಈ ಸಂದರ್ಭದಲ್ಲಿ ಕಸಬ್ ಗುಂಡು ಹಾರಿಸಿದರೂ, ಪ್ರಜ್ಞೆ ತಪ್ಪುವವರೆಗೂ ಅವರು ಕಸಬ್ ಕೈಯಲ್ಲಿದ್ದ ಎಕೆ47 ರೈಫಲನ್ನು ಬಿಟ್ಟಿರಲಿಲ್ಲ. ಆ ಹೊತ್ತಿಗೆ ಅತ್ತ ಕಡೆಯಿಂದ ಇತರ ಪೊಲೀಸರು ಜತೆಗಿದ್ದ ಮತ್ತೊಬ್ಬ ಉಗ್ರ ಇಸ್ಮಾಯಿಲ್‌ನನ್ನು ಕೊಂದು ಕಸಬ್‌ನನ್ನು ಸೆರೆ ಹಿಡಿದಿದ್ದರು. ಆದರೆ ಓಂಬಳೆಯವರನ್ನು ಬದುಕಿಸುವುದು ಸಾಧ್ಯವಾಗಿರಲಿಲ್ಲ.

ವೆಬ್ದುನಿಯಾವನ್ನು ಓದಿ