ಚಂದ್ರನಲ್ಲಿ ನೀರು ಪತ್ತೆ: ನಾಸಾ-ಇಸ್ರೋದ ಜಂಟಿ ಹಿರಿಮೆ

ಗುರುವಾರ, 24 ಸೆಪ್ಟಂಬರ್ 2009 (16:18 IST)
ND
ಭಾರತದ ಚೊಚ್ಚಲ ಚಂದ್ರ ಯಾತ್ರೆಯಾಗಿರುವ 'ಚಂದ್ರಯಾನ-1', ಚಂದ್ರನ ಮೇಲ್ಮೈಯಲ್ಲಿ ಅಪಾರ ಪ್ರಮಾಣದ ನೀರು ಇದೆ ಎಂಬುದನ್ನು ಪತ್ತೆ ಹಚ್ಚಿದ್ದು, ಇದರ ಹಿರಿಮೆಯು ನಾಸಾ ಒದಗಿಸಿದ ಚಂದ್ರನ ಖನಿಜಾಂಶ ನಕಾಶೆ ಯಂತ್ರ (ಎಂ3) ಕ್ಕೆ ಸಲ್ಲುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಶುಕ್ರವಾರ ಇಸ್ರೋ ಮತ್ತು ನಾಸಾ ಅಧಿಕೃತವಾಗಿ ಪ್ರಕಟಿಸಲಿದೆ.

ಚಂದ್ರಯಾನ ಗಗನ ನೌಕೆಯಲ್ಲಿರುವ ಪೇಲೋಡ್‌ಗಳಲ್ಲೊಂದರಲ್ಲಿ ಈ ಎಂ3 ಯಂತ್ರವಿದೆ. 386 ಕೋಟಿ ರೂ. ವೆಚ್ಚದ ಈ ಗಗನ ನೌಕೆಯು ಕಳೆದ ವರ್ಷದ ಅಕ್ಟೋಬರ್ 22ರಂದು ಗಗನಯಾತ್ರೆ ಆರಂಭಿಸಿ, ಕಳೆದ ತಿಂಗಳ (ಆಗಸ್ಟ್) 30ರಂದು ಸಂವಹನ ವೈಫಲ್ಯದಿಂದಾಗಿ ಅಂತ್ಯಗೊಂಡಿತ್ತು. ಚಂದ್ರಯಾನದ ಪ್ರಧಾನ ಗುರಿಗಳಲ್ಲೊಂದು ಎಂದರೆ ಚಂದ್ರನಲ್ಲಿ ನೀರು ಪತ್ತೆ ಮಾಡುವುದಾಗಿತ್ತು.

ಅದ್ಭುತ - ಇಸ್ರೋ ಮುಖ್ಯಸ್ಥ ಮಾಧವನ್ ನಾಯರ್
PTI
ಚಂದ್ರನಲ್ಲಿ ನೀರು ದೊರೆತಿರುವ ಬಗ್ಗೆ ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರ್ದೇಶಕ ಮಾಧವನ್ ನಾಯರ್ ಪ್ರತಿಕ್ರಿಯಿಸಿ, ಇದೊಂದು ಅದ್ಭುತವಾದ ಸಾಕ್ಷ್ಯಾಧಾರವಾಗಿದೆ ಎಂದು ಹೇಳಿದ್ದಾರೆ. ನೀರಿನ ಇರುವಿಕೆಯ ಕುರುಹುಗಳಷ್ಟೇ ಇದುವರೆಗೆ ದೊರೆತಿದ್ದವು. ಇದೀಗ ಚಂದ್ರಯಾನ-1ರ ಮೂಲಕ ಅತ್ಯಂತ ಮಹತ್ವದ ಆಧಾರವೊಂದು ಲಭಿಸಿದೆ. ಇದುವರೆಗೆ ಚಂದ್ರನಲ್ಲಿ ನೀರು ಇರುವ ಸಂಗತಿಯು ಯಾವುದೇ ಗಗನ ಯಾತ್ರೆಯಲ್ಲಿಯೂ ಧನಾತ್ಮಕವಾಗಿ ಖಚಿತಪಟ್ಟಿರಲಿಲ್ಲ ಎಂದಿದ್ದಾರೆ ನಾಯರ್.

ಚಂದ್ರಯಾನದಲ್ಲಿ ದೊರೆತ ಮಾಹಿತಿಗಳ ಸಂಸ್ಕರಣೆಯನ್ನು ಅಮೆರಿಕದ ಜೆಟ್ ಪೊಪಲ್ಷನ್ ಪ್ರಯೋಗಾಲಯ, ಅಹಮದಾಬಾದ್‌ನಲ್ಲಿರುವ ಭೌತ ಸಂಶೋಧನಾ ಪ್ರಯೋಗಾಲಯ ಮತ್ತು ಬಾಹ್ಯಾಕಾಶ ಅನ್ವಯಿಕ ಕೇಂದ್ರಗಳ ವಿಜ್ಞಾನಿಗಳು ನಡೆಸಿದ್ದರು.

ನಾಸಾ ವಿಜ್ಞಾನಿಗಳು ನೀಡಿರುವ ಮಾಹಿತಿಗಳು ಮತ್ತು ವಿಜ್ಞಾನ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಮಾಹಿತಿಗಳೊಂದಿಗೆ ಇಸ್ರೋ ಈ ಬಗ್ಗೆ ಶುಕ್ರವಾರ ಸಂಪೂರ್ಣ ವಿವರವನ್ನು ಅಧಿಕೃತವಾಗಿ ಪ್ರಕಟಿಸಲಿದೆ ಎಂದು ನಾಯರ್ ಹೇಳಿದ್ದಾರೆ.

ಈ ಮಧ್ಯೆ, ನಾಸಾ ಕೂಡ ತನಗೆ ದೊರೆತ ಮಾಹಿತಿಗಳನ್ನು ಪತ್ರಿಕಾಗೋಷ್ಠಿ ಮೂಲಕ ಜಗತ್ತಿಗೆ ಒದಗಿಸಲಿದೆ.

ವೆಬ್ದುನಿಯಾವನ್ನು ಓದಿ