ಚಂದ್ರಬಾಬು ನಾಯ್ಡು ಮೇಲೆ ತೆಲಂಗಾಣದಲ್ಲಿ ದಾಳಿ ಯತ್ನ

ಸೋಮವಾರ, 13 ಸೆಪ್ಟಂಬರ್ 2010 (15:06 IST)
ತೆಲಂಗಾಣ ಪ್ರಾಂತ್ಯದ ಮೆಹಬೂಬ್‌ನಗರಕ್ಕೆ ತೆರಳಿದ್ದ ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಅವರ ಬೆಂಗಾವಲು ವಾಹನದ ಮೇಲೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಕಾರ್ಯಕರ್ತರು ಕಲ್ಲು ತೂರಾಟ ನಡೆಸಿ ದಾಂಧಲೆ ಎಬ್ಬಿಸಿದ ಘಟನೆ ವರದಿಯಾಗಿದೆ.

ಇದರಿಂದಾಗಿ ನಾಯ್ಡು ಅವರಿಗೆ ರಕ್ಷಣೆ ಒದಗಿಸುತ್ತಿದ್ದ ಎರಡು ವಾಹನಗಳನ್ನು ಸಂಪೂರ್ಣ ಜಖಂಗೊಂಡಿವೆ. ಆದರೆ ನಾಯ್ಡು ಅಪಾಯದಿಂದ ಪಾರಾಗಿದ್ದಾರೆ. ಕೆಲವು ಟಿಡಿಪಿ ಕಾರ್ಯಕರ್ತರು ಮತ್ತು ಮಾಧ್ಯಮದವರು ಗಾಯಗೊಂಡಿದ್ದಾರೆ.

ನಾಯ್ಡು ಅವರ ವಿರುದ್ಧ ಮತ್ತು ತೆಲಂಗಾಣ ಪರ ಘೋಷಣೆಗಳನ್ನು ಕೂಗುತ್ತಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಪರಿಗಿ ಎಂಬಲ್ಲಿ ಯತ್ನಿಸಿದಾಗ ಹಿಂಸಾಚಾರ ಭುಗಿಲೆದ್ದಿತು.

ಈ ಸಂದರ್ಭದಲ್ಲಿ ಟಿಆರ್ಎಸ್ ಕಾರ್ಯಕರ್ತರು ಪೊಲೀಸರಿಗೆ ಕಲ್ಲು ತೂರಾಟ ನಡೆಸಿದರು. ಪರಿಸ್ಥಿತಿ ಉದ್ವಿಗ್ನಗೊಂಡಿದ್ದರಿಂದ ನಾಯ್ಡು ಅವರ ಬೆಂಗಾವಲು ಪಡೆಗಳ ವಾಹನಗಳ ಮೇಲೂ ದಾಳಿ ನಡೆಯಿತು. ಈ ಸಂದರ್ಭದಲ್ಲಿ ಟಿಡಿಪಿ ಕಾರ್ಯಕರ್ತರು ಮತ್ತು ಪತ್ರಕರ್ತರು ಗಾಯಗೊಂಡರು.

ಓರ್ವ ಪೊಲೀಸ್ ಪೇದೆಯ ತಲೆಗೂ ಗಾಯವಾಗಿದೆ. ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ಕುರಿತು ನಾಯ್ಡು ಅವರು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಈ ಸಂದರ್ಭದಲ್ಲಿ ಟಿಆರ್ಎಸ್ ಕಾರ್ಯಕರ್ತರು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಟಿಡಿಪಿ ನಾಯಕರೊಬ್ಬರು ಘಟನೆಗೆ ನೇರವಾಗಿ ಟಿಆರ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಕಾರಣ ಎಂದು ದೂಷಿಸಿದ್ದಾರೆ.

ಟಿಡಿಪಿ ಮುಖ್ಯಸ್ಥ ಬೆಳಗ್ಗಿನ ಉಪಹಾರ ಸೇವಿಸಲೆಂದು ಬಂದಿದ್ದಾಗ ಅವರನ್ನು ತಡೆದ ಕಾರ್ಯಕರ್ತರು ಪಿರಿಗಿ ಶಾಸಕ ಕೆ. ಹರೀಶ್ವರ್ ರೆಡ್ಡಿಯವರ ಮನೆಗೆ ನುಗ್ಗಿದರು ಎಂದು ಅವರು ಆರೋಪಿಸಿದ್ದಾರೆ.

ಶಾಸಕನ ಮನೆಗೆ ನುಗ್ಗಲೆತ್ನಿಸಿದ ಟಿಆರ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರು, ಈ ಹೊತ್ತಿನಲ್ಲಿ ನಾಯ್ಡು ಅವರ ಬೆಂಗಾವಲು ವಾಹನಗಳ ಕಿಟಕಿಗಳ ಗಾಜುಗಳನ್ನು ಪುಡಿಗೈದರು. ಇದನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ ಕ್ಯಾಮರಾಮ್ಯಾನ್‌ಗಳ ಮೇಲೂ ದಾಳಿ ಮಾಡಲಾಯಿತು. ಕೆಲವರನ್ನು ಥಳಿಸಲಾಗಿದೆ ಎಂದು ದೂರವಾಣಿಯ ಮೂಲಕ ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಶತಯತ್ನ ನಡೆಸಿ ಯಶಸ್ವಿಯಾಗಿದರು.

ವೆಬ್ದುನಿಯಾವನ್ನು ಓದಿ