ಚೋರ್- ಪೊಲೀಸ್ ಭಾಯಿ ಭಾಯಿ : 1.3 ಕೋಟಿ ರೂಪಾಯಿ ದರೋಡೆ

ಗುರುವಾರ, 19 ಡಿಸೆಂಬರ್ 2013 (14:07 IST)
PR
ಚೋರ್- ಪೊಲೀಸ್ ಆಟ ಮಕ್ಕಳಿದ್ದಾಗ ನಾವು ಆಟವಾಡಿರಬಹುದು. ಆದರೆ, ಘಟನೆಯೊಂದರಲ್ಲಿ ಪೊಲೀಸರು ಮತ್ತು ಕಳ್ಳರು ಚೋರ್- ಪೊಲೀಸ್ ಆಟವಾಡಿ ಬರೋಬ್ಬರಿ 1.29 ಕೋಟಿ ರೂಪಾಯಿ ಲೂಟಿ ಮಾಡಿ ಕೃಷ್ಣನ ಜನ್ಮಸ್ಥಳ ಸೇರಿದ್ದಾರೆ.

ಕಳೆದ ಡಿಸೆಂಬರ್ 10 ರಂದು ಆಭರಣ ಮಳಿಗೆಯಲ್ಲಿ ಉದ್ಯೋಗಿಯಾಗಿರುವ ಮೂವರು ವ್ಯಕ್ತಿಗಳು ನಗದು ಮತ್ತು ಆಭರಣಗಳೊಂದಿಗೆ ಎಕ್ಸ್‌ಪ್ರೆಸ್‌ ಹೈವೇ ಮೂಲಕ ಮುಂಬೈನಿಂದ ಬೆಂಗಳೂರಿಗೆ ತೆರಳಲು ಬೆಳಿಗ್ಗೆ 9.30ಕ್ಕೆ ಬಸ್ ಹತ್ತಿದ್ದಾರೆ. ಫುಡ್ ಮಾಲ್ ಬಳಿ ಉಪಹಾರ ಸೇವಿಸಲು ಬಸ್ ನಿಂತಾಗ ಪೊಲೀಸ್ ವೇಶದಲ್ಲಿದ್ದ ಏಳು ಆರೋಪಿಗಳು ಉದ್ಯೋಗಿಗಳನ್ನು ಸಂಪರ್ಕಿಸಿ ಬಾಂಬ್‌ ಬ್ಲಾಸ್ಟ್‌ ಪ್ರಕರಣದಲ್ಲಿ ಬಂಧಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಪೊಲೀಸರ ಆರೋಪಗಳಿಂದ ಆಘಾತಗೊಂಡ ಉದ್ಯೋಗಿಗಳು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಸಹಪ್ರಯಾಣಿಕರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದಾಗ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮೂವರನ್ನು ಬಂಧಿಸುವಂತೆ ಆದೇಶವಿದೆ ಎಂದು ಹೇಳಿ ಎಳೆದುಕೊಂಡು ಹೋಗಿ ಟವೇರಾ ಕಾರಿನಲ್ಲಿ ಪರಾರಿಯಾಗಿದ್ದಾರೆ.

ಲೋನಾವಾಲಾ ಪ್ರದೇಶ ತಲುಪಿದ ನಂತರ ಆರೋಪಿಗಳು ಆಭರಣ ಮಳಿಗೆಯ ಉದ್ಯೋಗಿಗಳಾದ ಮಾರುತಿ ಲಾವೋಟೆ, ಸಚಿನ್ ಟಕಾಲೆ ಮತ್ತು ಅಮುಲ್ ಮೋರೆಯವರ ಮೊಬೈಲ್ ಫೋನ್, ನಗದು ಹಣ ಮತ್ತು ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಸಾಂಗ್ಲಿಯಲ್ಲಿರುವ ಆಭರಣ ಮಳಿಗೆಯ ಮಾಲೀಕ ಸುನೀಲ್ ಕದಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಪಡೆದು ತನಿಖೆ ಆರಂಭಿಸಿದ ಪೊಲೀಸರು ಖಾಪೋಲಿ, ಖಾಲಾಪುರ್ ಮತ್ತು ಅಲಿಬೌಗ್ ಠಾಣೆಗಳ ಪ್ರದೇಶಗಳಲ್ಲಿ ವಿಚಾರಣೆ ಆರಂಭಿಸಿದ್ದಾರೆ.

ತನಿಖೆಯ ನಂತರ ಆಭರಣ ಮಳಿಗೆಯ ಉದ್ಯೋಗಿಗಳೇ ದರೋಡೆಯಲ್ಲಿ ಭಾಗಿಯಾಗಿರುವುದು ಬಹಿರಂಗವಾಗಿದೆ. ಇಬ್ಬರು ಪೊಲೀಸ್ ಪೇದೆಗಳು ಆರೋಪಿಗಳೊಂದಿಗೆ ಶಾಮೀಲಾಗಿ 1.29 ಕೋಟಿ ರೂಪಾಯಿಗಳನ್ನು ದರೋಡೆ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಕುಶ್ ಶಿಂಧೆ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ