ಜಂಟಿ ಹೇಳಿಕೆ: ಪಿಎಂಗೆ ಸೋನಿಯಾ ಬೆಂಬಲ

ಶನಿವಾರ, 1 ಆಗಸ್ಟ್ 2009 (14:38 IST)
ಭಾರತ-ಪಾಕಿಸ್ತಾನ ಜಂಟಿ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಈ ಕುರಿತು ಯಾವುದೇ ಗೊಂದಲ ಅಥವಾ ತಪ್ಪುತಿಳುವಳಿಕೆ ಇರಬಾರದು ಎಂಬುದಾಗಿ ತನ್ನ ಪಕ್ಷದವರಿಗೆ ಹೇಳಿದ್ದಾರೆ.

ಇದೇವೇಳೆ ಪಾಕಿಸ್ತಾನವೂ ಸೇರಿದಂತೆ ಭಾರತದ ವಿದೇಶಾಂಗ ನೀತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದೂ ಅವರು ಹೇಳಿದ್ದಾರೆ.

"ಪಾಕಿಸ್ತಾನವು ಉಗ್ರವಿರೋಧಿ ವಿಚಾರದ ಕುರಿತು ರಚನಾತ್ಮಕ ಹೆಜ್ಜೆಗಳನ್ನು ತೋರುವ ತನಕ ಅದರೊಂದಿಗೆ ಮಾತುಕತೆ ಇಲ್ಲ" ಎಂದವರು, ಜಂಟಿ ಹೇಳಿಕೆ ಕುರಿತು ಪ್ರಧಾನಿ ಸಂಸತ್ತಿನಲ್ಲಿ ಮಾತನಾಡಿದ ಒಂದು ದಿನದ ಬಳಿಕ ನಡೆಸಲಾಗಿರುವ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಹೇಳಿದ್ದಾರೆ.

ಮುಂಬೈದಾಳಿಯ ರೂವಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಹಾಗೂ ಭಾರತದ ವಿರುದ್ಧ ಉಗ್ರವಾದ ಕೃತ್ಯಕ್ಕೆ ತನ್ನ ನೆಲವನ್ನು ಬಳಸಲು ಅವಕಾಶ ನೀಡುವುದಿಲ್ಲ ಎಂಬುದರ ಕುರಿತು ನೀಡಿರುವ ತನ್ನ ಭರವಸೆಯನ್ನು ಈಡೇರಿಸುವುದರ ಮೇಲೆ ಮಾತುಕತೆಯ ಮುಂದುವರಿಕೆ ಅವಲಂಬಿಸಿದೆ ಎಂದು ಸೋನಿಯಾ ಗಾಂಧಿ ಸಭೆಯಲ್ಲಿ ಹೇಳಿದ್ದಾರೆಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ