ಜಲಪ್ರಳಯ ಮಾನವ ನಿರ್ಮಿತ :ಪರಿಸರವಾದಿಗಳು

ಶನಿವಾರ, 22 ಜೂನ್ 2013 (08:53 IST)
PR
PR
ಉತ್ತರ ಭಾರತ ಜಲಪ್ರಳಯದಿಂದ ತತ್ತರಿಸಿ ಹೋಗಿದೆ . ನೈಸರ್ಗಿಕ ವಿಕೋಪಕ್ಕೆ ಸಾಕಷ್ಟು ಜನ ಸಾವನ್ನಪ್ಪಿದ್ದಾರೆ. ಗಂಗಾ ಮಾತೆ ಮಾನವಮೇಲೆ ಮುನಿಸಿಕೊಂಡದ್ದು ಯಾಕೆ? ಹಿಂದೆ ಪುರಾಣದಲ್ಲಿ ಏನಾದರು ನಡೆದಿತ್ತಾ? ಯಾರದಾದರೂ ಶಾಪವಿತ್ತಾ ? ಈ ನಿಸರ್ಗಕ್ಕಾದರು ಯಾಕೆ ಮನುಕುಲದ ಮೇಲೆ ಮುನಿಸು ? ಹೀಗೆ ಸಾಕಷ್ಟು ಕಡೆ ಸಾಕಷ್ಟು ಪ್ರಶ್ನೆಗಳನ್ನು ಜನ ಕೇಳ್ತಾ ಶಪಿಸುತ್ತಿದ್ದಾರೆ . ಆದರೆ ಈ ನಿಸರ್ಗ ವಿಕೋಪಕ್ಕೆ ಯಾರ ಮುನಿಸು ಇಲ್ಲ, ಇದಕ್ಕೆಲ್ಲ ಕಾರಣ ಮಾನವನೇ ಅಂತ ಪರಿಸರವಾದಿಗಳು ಹೇಳುತ್ತಾರೆ. ಇದೊಂದು ಮಾನವ ನಿರ್ಮಿತ ಜಲ ಪ್ರಳಯ ಅಂತ ಪರಿಸರವಾದಿಗಳು ವಾದಿಸುತ್ತಿದ್ದಾರೆ.

ಮೇಘಸ್ಫೋಟ, ಪ್ರವಾಹ ಹಾಗೂ ಭೂಕುಸಿತದಿಂದ ನೂರಾರು ಮಂದಿ ಸಾವನ್ನಪ್ಪಿ, ಸಾವಿರಾರು ಮಂದಿ ಕಣ್ಮರೆಯಾಗಿರುವ ಉತ್ತರಾಖಂಡದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿರುವ ಮಧ್ಯೆಯೇ, ಈ ದುರಂತ ಮಾನವ ನಿರ್ಮಿತವೇ ಅಥವಾ ನೈಸರ್ಗಿಕ ಸೃಷ್ಟಿಯೇ ಎಂಬ ಚರ್ಚೆ ಆರಂಭವಾಗಿದೆ.

ಉತ್ತರಾಖಂಡದ 'ಜಲಪ್ರಳಯ' ಮಾನವ ಸೃಷ್ಟಿ ಎಂದು ಪರಿಸರವಾದಿಗಳು ವಾದಿಸುತ್ತಿದ್ದರೆ, ಮುಖ್ಯಮಂತ್ರಿ ವಿಜಯ್‌ ಬಹುಗುಣ ಇದನ್ನು ನಿರಾಕರಿಸಿ ನೈಸರ್ಗಿಕ ದುರಂತ ಎಂದು ಹೇಳಿದ್ದಾರೆ. ಅಲ್ಲದೆ ಉತ್ತರಾಖಂಡದಲ್ಲಿನ ಪರಿಸ್ಥಿತಿಗೆ 'ಹಿಮಾಲಯ ಸುನಾಮಿ' ಕಾರಣ ಎಂದೂ ಹೋಲಿಕೆ ಮಾಡಿದ್ದಾರೆ.

ಆದರೆ, ಗಿರಿಕಂದರಗಳಿಂದ ಕೂಡಿರುವ ಉತ್ತರಾಖಂಡದಲ್ಲಿ ಈ ಮಟ್ಟಿಗಿನ ದುರಂತ ಸಂಭವಿಸಲು ಮನುಷ್ಯನ ದುರಾಸೆಯೇ ಕಾರಣ ಎಂಬುದನ್ನು ಬಹುತೇಕ ಮಂದಿ ಒಪ್ಪಿಕೊಳ್ಳುತ್ತಿದ್ದಾರೆ. ನದಿ ತಟದಲ್ಲಿ ಮಿತಿಮೀರಿದ ಅತಿಥಿ ಗೃಹ, ಹೋಟೆಲ್‌ ಹಾಗೂ ಭಾರೀ ಪ್ರಮಾಣದ ಒತ್ತುವರಿಯಾಗಿರುವುದರಿಂದ ಈ ದುರಂತ ಎಂದೋ ಆಗಬೇಕಿತ್ತು ಎಂದು ಹಲವರು ವಾದಿಸುತ್ತಿದ್ದಾರೆ.

ನದಿ ತೀರದ 100 ಮೀಟರ್‌ ವ್ಯಾಪ್ತಿಯಲ್ಲಿ ಯಾವುದೆ ರೀತಿಯ ಕಟ್ಟಡಗಳನ್ನು ನಿರ್ಮಿಸಬಾರದು ಎಂಬ ನಿಯಮ 2002ರಿಂದಲೇ ಇದ್ದರೂ ಅದನ್ನು ಉಲ್ಲಂ ಸುತ್ತಲೇ ಬರಲಾಗಿದೆ. ಅದೂ ಅಲ್ಲದೆ ಈ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಕೇಂದ್ರ ಸರ್ಕಾರ ಘೋಷಿಸಿದ್ದರೂ ಅದನ್ನು ಜಾರಿಗೆ ತರಲು ಉತ್ತರಾಖಂಡ ಸರ್ಕಾರವೇ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.

PR
PR
ಪರಿಸರ ಸೂಕ್ಷ್ಮ ಪ್ರದೇಶ ಎಂಬ ಘೋಷಣೆ ಮಾಡಿದರೆ ಈ ಭಾಗದಲ್ಲಿ ರಸ್ತೆ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಆಗುವುದಿಲ್ಲ. ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ರಾಜ್ಯಕ್ಕೆ ಭಾರೀ ತೊಂದರೆಯಾಗಲಿದೆ ಎಂದು ಮೊದಲಿನಿಂದಲೂ ವಾದಿಸಿಕೊಂಡು ಬಂದಿದೆ. ಈ ಹಿಂದಿನ ಬಿಜೆಪಿ ಹಾಗೂ ಹಾಲಿ ಮುಖ್ಯಮಂತ್ರಿ ಇಬ್ಬರೂ ಉತ್ತರಾಖಂಡವನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿಸಲು ಬಿಡುತ್ತಿಲ್ಲ ಎಂಬ ವಾದಗಳು ಕೇಳಿಬರುತ್ತಿವೆ.

2012ರ ಡಿಸೆಂಬರ್‌ನಲ್ಲಿ ಗಂಗೋತ್ರಿಯಿಂದ ಉತ್ತರಕಾಶಿವರೆಗೆ ಭಾಗೀರಥಿ ನದಿ ಹರಿಯುವ 100 ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿತ್ತು. ತನ್ಮೂಲಕ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ನಿರ್ಬಂಧ ಹೇರಿತ್ತು. ಆದರೆ ಅದು ದಾಖಲೆಗಳಲ್ಲಿ ಮಾತ್ರವೇ ಇದೆ.

ರಾಜ್ಯ ಸರ್ಕಾರಗಳು ಒತ್ತಡಗಳನ್ನು ಬದಿಗೊತ್ತಿ ಕೇದಾರನಾಥ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ಒತ್ತು ನೀಡಬೇಕೆಂದು ಕೇಂದ್ರ ಪರಿಸರ ಸಚಿವೆ ಜಯಂತಿ ನಟರಾಜನ್‌ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ