ತರೂರ್ ಹೇಳಿಕೆ ಬೇಜವಾಬ್ದಾರಿಯುತವಾದದ್ದು: ಬಿಜೆಪಿ ಖಂಡನೆ

ಭಾನುವಾರ, 28 ಫೆಬ್ರವರಿ 2010 (17:54 IST)
ಭಾರತ ಹಾಗೂ ಪಾಕ್ ಸೌಹಾರ್ದ ಸಂಬಂಧಕ್ಕೆ ಭಾರತ ಪರ ಸೌದಿ ಅರೇಬಿಯಾ ಉತ್ತಮ ಸಂಧಾನಕಾರನಾಗಬಹುದು ಎಂಬ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಶಶಿ ತರೂರ್ ಅವರ ಹೇಳಿಕೆ ಕುರಿತಂತೆ ಬಿಜೆಪಿ ಬೇಜವಾಬ್ದಾರಿ ಹೇಳಿಕೆಯೆಂದು ಟೀಕಿಸಿದೆ. ಅಲ್ಲದೆ, ಕೂಡಲೇ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಈ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಸ್ಪಷ್ಟನೆ ನೀಡಬೇಕೆಂದು ಬಿಜೆಪಿ ಒತ್ತಾಯಿಸಿದೆ.

ತರೂರ್ ಅವರ ಹೇಳಿಕೆ ನಿಜಕ್ಕೂ ತುಂಬ ಬೇಜವಾಬ್ದಾರಿಯುತವಾದುದು. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ಅವರ ನಿಯೋಗದಲ್ಲಿರುವ ಶಶಿ ತರೂರ್ ಅವರು ಈ ಹೇಳಇಕೆ ನೀಡಿದ್ದರಿಂದ, ಇದು ನಿಜವಾಗಿಯೂ ಪ್ರಧಾನಿ ಅವರಿಗೆ ಸಮ್ಮತವಾದುದ್ದೇ ಅಲ್ಲವೇ ಎಂಬ ಸ್ಪಷ್ಟನೆ ನಮಗೆ ಅಗತ್ಯವಿದೆ ಎಂದು ರವಿಶಂಕರ್ ಪ್ರಸಾದ್ ಹೇಳಿದರು.

ಭಾರತ ಪಾಕ್ ವಿಷಯದಲ್ಲಿ ಇನ್ನೊಬ್ಬರ ಮಧ್ಯಪ್ರವೇಶ ಎಂದಿಗೂ ಸಾಧ್ಯವಿಲ್ಲ. ತರೂರ್ ಅವರು ಭಾರತದ ಸಾರ್ವಭೌಮತ್ವಕ್ಕೇ ಕಳಂಕ ತಂದಿದ್ದಾರೆ. ಹಾಗಾಗಿ ಈ ಕುರಿತಂತೆ ಪ್ರಧಾನಿ ಅವರೇ ಖುದ್ದಾಗಿ ಸಂಸತ್ತಿನಲ್ಲಿ ಸ್ಪಷ್ಟೀಕರಣ ನೀಡಬೇಕು ಎಂದು ಅವರು ಒತ್ತಾಯಿಸಿದರು.

PTI
ನಾನು ಹಾಗೆ ಹೇಳಿಲ್ಲ ಎಂದ ತರೂರ್!: ಆದರೆ ಇತ್ತ ತರೂರ್ ಹೇಳಿಕೆ ವಿವಾದಕ್ಕೆ ಎಡೆ ಮಾಡುತ್ತಿದ್ದಂತೆ, ಕೆಲವೇ ಗಂಟೆಗಳಲ್ಲಿ ಸ್ವತಃ ತರೂರ್ ಟ್ವಿಟರ್‌ನಲ್ಲಿ ತಾನು ಹಾಗೆ ಹೇಳಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ!

ಭಾರತ ಹಾಗೂ ಪಾಕ್ ನಡುವಿನ ಸೌಹಾರ್ದ ಸಂಬಂಧಕ್ಕೆ ಸೌದಿ ಅರೇಬಿಯಾ ಮಧ್ಯಸ್ಥಿಕೆ ವಹಿಸಬಹುದೆಂದು ನಾನು ಹೇಳಿಲ್ಲ. ಬದಲಾಗಿ ನನ್ನ ಹೇಳಿಕೆಯನ್ನು ಭಾರತದ ಮಾಧ್ಯಮಗಳು ತಪ್ಪಾಗಿ ಅರ್ಥ ಮಾಡಿಕೊಂಡಿವೆ ಎಂದಿದ್ದಾರೆ.

ನಾನು ಸೌದಿ ಅರೇಬಿಯಾದ ಮಧ್ಯಸ್ಥಿಕೆಯ ವಿಚಾರ ಹೇಳಿಯೇ ಇಲ್ಲ. ನಾನು ಹೇಳಿದ ಶಬ್ಧವನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಹೇಳಿದ್ದು ಸೌದಿ ಅರೇಬಿಯಾ ಇಂಟರ್‌ಲೊಕ್ಯೂಟರ್ ಆಗಿ ವ್ಯವಹರಿಸಬಹುದು ಎಂದು. ಇಂಟರ್‍‌ಲೊಕ್ಯುಟರ್ ಎಂದರೆ ಸಂಧಾನಕಾರ ಎಂಬರ್ಥವಲ್ಲ. ನಾನು ಯಾರಲ್ಲಿ ಮಾತಾಡುತ್ತೇನೆಯೋ, ಅದನ್ನು ಕೇಳುವ ವ್ಯಕ್ತಿ ಇಂಟರ್‌ಲೊಕ್ಯೂಟರ್ ಆಗುತ್ತಾರೆ. ಸೌದಿ ಅರೇಬಿಯಾ ಜೊತೆಗೆ ನಾವು ಮಾತಾಡುತ್ತಿದ್ದೇವೆ ಎಂಬುದನ್ನೇ ಮಾಧ್ಯಮ ತಿರುಚಿದೆ ಎಂದು ಶಶಿ ತರೂರ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಭಾರತ ಪಾಕ್ ಮಧ್ಯಸ್ಥಿಕೆಗೆ ಸೌದಿ: ತರೂರ್ ಹೊಸ ವಿವಾದ!

ವೆಬ್ದುನಿಯಾವನ್ನು ಓದಿ