ತಾರತಮ್ಯ ಇಲ್ಲ; ಆಂಧ್ರಕ್ಕೆ ಸಾವಿರ ಕೋಟಿ: ಸಿಂಗ್

ಶುಕ್ರವಾರ, 9 ಅಕ್ಟೋಬರ್ 2009 (20:12 IST)
PTI
ನೈಸರ್ಗಿಕ ಪ್ರಕೋಪ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಕರ್ನಾಟಕವೂ ಸೇರಿದಂತೆ ಯಾವುದೇ ರಾಜ್ಯಕ್ಕೆ ತಾನು ತಾರತಮ್ಯ ಎಸಗಿಲ್ಲ ಎಂದು ಪ್ರಧಾನಿ ಮನಮೋಹನ ಸಿಂಗ್ ಸ್ಪಷ್ಟಪಡಿಸಿದ್ದು, ಆಂಧ್ರ ಪ್ರದೇಶದಲ್ಲಿ ನೆರೆ ಪರಿಹಾರ ಕಾರ್ಯಗಳಿಗಾಗಿ ಶನಿವಾರ 1000 ಕೋಟಿ ರೂ. ಕೇಂದ್ರೀಯ ನೆರವು ಘೋಷಿಸಿದ್ದಾರೆ.

ಈ ರೀತಿಯ ಮಾನವೀಯ ದುರಂತದ ವಿಷಯ ಬಂದಾಗ, ನಾನು ಪ್ರಧಾನಿಯಾಗಿರುವವರೆಗೂ, ಆಯಾ ರಾಜ್ಯಗಳ ರಾಜಕೀಯ ಸಂಕೀರ್ಣತೆಯ ಕಾರಣಕ್ಕಾಗಿ ಒಂದು ರಾಜ್ಯದಿಂದ ಮತ್ತೊಂದಕ್ಕೆ ಯಾವುದೇ ತಾರತಮ್ಯ ಎಸಗುವುದಿಲ್ಲ ಎಂದು ಶುಕ್ರವಾರ ಆಂಧ್ರ ಪ್ರದೇಶದಲ್ಲಿ ಪ್ರವಾಹ ಪೀಡಿತ ಪ್ರದೇಶದ ಸರ್ವೇಕ್ಷಣೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಆಂಧ್ರ ಪ್ರದೇಶದ ನೆರೆ ಪೀಡಿತ ಕರ್ನೂಲು, ಕೃಷ್ಣಾ, ಮೆಹಬೂಬನಗರ ಮತ್ತಿತರ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ ಅವರು ಪರಿಸ್ಥಿತಿಯನ್ನು ಅವಲೋಕಿಸಿದರು. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಆಳ್ವಿಕೆಯಲ್ಲಿರುವುದರಿಂದ ಕೇಂದ್ರ ಸರಕಾರವು ಆ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆಯೇ ಎಂಬ ಪತ್ರಕರ್ತರೊಬ್ಬರ ನೇರ ಪ್ರಶ್ನೆಗೆ ಅವರು ಈ ರೀತಿಯ ಉತ್ತರ ನೀಡಿದರು.

ಆಂಧ್ರಕ್ಕೆ 1000 ಕೋಟಿ ರೂ. ಪರಿಹಾರ ಘೋಷಣೆ
PTI
ಆಂಧ್ರ ಪ್ರದೇಶದ ನೈಸರ್ಗಿಕ ಪ್ರಕೋಪವನ್ನು ರಾಷ್ಟ್ರೀಯ ವಿಕೋಪ ಎಂದು ಬಣ್ಣಿಸಿದ ಪ್ರಧಾನಿ, ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗಾಗಿ ಒಂದು ಸಾವಿರ ಕೋಟಿ ರೂ. ನೆರವು ಘೋಷಿಸಿದರು.

ಈ ಅಭೂತಪೂರ್ವ ಸವಾಲು ಎದುರಿಸಲು ರಾಜ್ಯಕ್ಕೆ ಕೇಂದ್ರವು ಸಕಲ ರೀತಿಯ ನೆರವು ನೀಡಲಿದೆ. ಹಣಕ್ಕೆ ಯಾವುದೇ ಕೊರತೆಯಾಗಬಾರದು ಎಂದ ಅವರು, ಕೇಂದ್ರೀಯ ಸಹಕಾರದ ಕುರಿತ ರಾಜ್ಯ ಸರಕಾರದ ಬೇಡಿಕೆಗೆ ಪ್ರತಿಕ್ರಿಯಿಸುತ್ತಾ, ಈ ರೀತಿಯ ನೆರವು ಒದಗಿಸುವ ಮೊದಲು ಕೆಲವೊಂದು ಶಿಷ್ಟಾಚಾರಗಳನ್ನು ಪೂರ್ಣಗೊಳಿಸಬೇಕಾಗುತ್ತದೆ ಎಂದರು.

ರಾಜ್ಯ ಸರಕಾರವು ಮೊದಲು ನಷ್ಟದ ಅಂದಾಜು ಸಿದ್ಧಪಡಿಸಿ ಕೊಡಬೇಕು, ಅದನ್ನು ಕೇಂದ್ರವು ಪರಿಶೀಲಿಸುತ್ತದೆ. ಆ ಬಳಿಕ ಚರ್ಚಿಸಿ ಯಾವ ಪ್ರಮಾಣದ ನೆರವು ನೀಡಬೇಕೆಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಪ್ರಧಾನಿ ನುಡಿದರು.

ಇದನ್ನು ರಾಷ್ಟ್ರೀಯ ವಿಕೋಪ ಎಂದು ಕೇಂದ್ರವು ಘೋಷಿಸುತ್ತದೆಯೇ ಎಂದು ಕೇಳಿದಾಗ, ಇದೂ ಕೂಡ ತನ್ನದೇ ರೀತಿಯ ಒಂದು ರಾಷ್ಟ್ರೀಯ ವಿಕೋಪವೇ ಎಂದಷ್ಟೇ ಹೇಳಿದರು.

ಮನಮೋಹನ್ ಸಿಂಗ್ ಅವರು ಶನಿವಾರ ಕರ್ನಾಟಕಕ್ಕೆ ಆಗಮಿಸಿ, ಪ್ರವಾಹ ಪೀಡಿತ ಪ್ರದೇಶಗಳ ಸರ್ವೇಕ್ಷಣೆ ನಡೆಸಲಿದ್ದಾರೆ.

ವೆಬ್ದುನಿಯಾವನ್ನು ಓದಿ