ತಿರುಪತಿ ಹೊಸ ವರ್ಷ: ಲಕ್ಷ ಭಕ್ತರಿಗೆ ಉಚಿತ ಲಡ್ಡು

ಸೋಮವಾರ, 31 ಡಿಸೆಂಬರ್ 2007 (10:38 IST)
ಪ್ರಖ್ಯಾತ ತಿರುಪತಿಯಲ್ಲಿ ಹೊಸ ವರ್ಷದ ದಿನದಂದು ದೇವಳ ಸಂದರ್ಶಿಸುವ ಭಕ್ತರಿಗೆ ಒಂದು ಲಕ್ಷ "ಲಡ್ಡು" ಪ್ರಸಾದ ವಿತರಿಸಲು ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಸರ್ವ ರೀತಿಯಲ್ಲಿ ಸಜ್ಜಾಗಿದೆ.

ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಟಿಟಿಡಿ ಸ್ಥಳೀಯ ಸಲಹಾ ಸಮಿತಿ ಉಸ್ತುವಾರಿ ವಹಿಸಿರುವ ಕೆ.ಆನಂದ್ ಕುಮಾರ್ ರೆಡ್ಡಿ ಅವರು, 2008ರ ಜನವರಿ ಒಂದರಂದು ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ತಿರುಪತಿ ಸಂದರ್ಶಿಸುವ ನಿರೀಕ್ಷೆ ಇದೆ. ಪ್ರತಿಯೊಬ್ಬ ಭಕ್ತರಿಗೂ ಉಚಿತವಾಗಿ ಲಡ್ಡುಗಳನ್ನು ವಿತರಿಸಲಾಗುತ್ತದೆ ಎಂದು ಹೇಳಿದರು.

ಇದು ಮಾತ್ರವಲ್ಲದೆ, ಶ್ರೀವೆಂಕಟೇಶ್ವರನ ಪ್ರಸಾದವಾಗಿರುವ ಲಡ್ಡುಗಳನ್ನು ಮಂದಿರದ ಆವರಣದಲ್ಲಿರುವ ವಿಶೇಷ ಕೌಂಟರುಗಳ ಮೂಲಕ ಮಾರಾಟದ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ತಿಳಿಸಿದರು.

ಹೊಸ ವರ್ಷಾಚರಣೆ ಪ್ರಯುಕ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಪೊಲೀಸರು, ಸ್ವಯಂಸೇವಕರು ಮತ್ತು ಇತರ ಅಧಿಕಾರಿಗಳು ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಸಹಕಾರ ನೀಡಲಿದ್ದಾರೆ. ಆ ದಿನ ದೇವಸ್ಥಾನವು ಮುಂಜಾನೆ 2.30ರಿಂದ ರಾತ್ರಿ 11 ಗಂಟೆವರೆಗೆ ತೆರೆದಿರುತ್ತದೆ ಎಂದು ರೆಡ್ಡಿ ತಿಳಿಸಿದರು.

ವೆಬ್ದುನಿಯಾವನ್ನು ಓದಿ