ತೆಲಂಗಾಣ ಪ್ರತ್ಯೇಕ ರಾಜ್ಯ: ಕೇಂದ್ರಕ್ಕೆ ಅಂತಿಮ ಗಡುವು

ಶನಿವಾರ, 26 ಡಿಸೆಂಬರ್ 2009 (14:46 IST)
ಪ್ರತ್ಯೇಕ ರಾಜ್ಯಕ್ಕಾಗಿನ ಹಿಂಸಾಭರಿತ ಹೋರಾಟವು ಶನಿವಾರವೂ ಮುಂದುವರಿದಿದ್ದು, ಸೋಮವಾರದೊಳಗೆ ಪ್ರತ್ಯೇಕ ರಾಜ್ಯ ರಚನೆಗೆ ಕಾಲಮಿತಿ ಘೋಷಿಸುವಂತೆ ತೆಲಂಗಾಣ ರಾಜಕೀಯ ಜಂಟಿ ಕ್ರಿಯಾ ಸಮಿತಿ (ಜೆಎಸಿ) ಕೇಂದ್ರ ಸರಕಾರಕ್ಕೆ ಗಡುವು ನೀಡಿದೆ. ಘೋಷಣೆ ಮಾಡದಿದ್ದರೆ ಡಿ.29ರಿಂದ ಅನಿರ್ದಿಷ್ಟಾವಧಿ ಬಂದ್‌ಗೆ ಕರೆ ನೀಡಲಾಗುತ್ತದೆ ಎಂದೂ ಎಚ್ಚರಿಸಲಾಗಿದೆ.

ಕೇಂದ್ರದ ಘೋಷಣೆಗಾಗಿ ಸೋಮವಾರದವರೆಗೆ ಕಾಯುತ್ತೇವೆ. ಇಲ್ಲವಾದಲ್ಲಿ ಅನಿರ್ದಿಷ್ಟಾವಧಿ ಬಂದ್ ನಡೆಸುತ್ತೇವೆ ಎಂದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಮುಖ್ಯಸ್ಥ ಕೆ.ಚಂದ್ರಶೇಖರ ರಾವ್ ಶನಿವಾರ ಎಚ್ಚರಿಸಿದ್ದಾರೆ.

ತೆಲಂಗಾಣ ಪ್ರದೇಶದ ಎಲ್ಲ ಗ್ರಾಮಗಳಲ್ಲಿಯೂ ಪ್ರತಿಭಟನೆ ಏರ್ಪಡಿಸಲು ಜೆಎಸಿ ನಿರ್ಧರಿಸಿದೆ. ಈ ಮಧ್ಯೆ, ಬಂದ್ ಕರೆ ಹಿಂತೆಗೆದುಕೊಂಡಿದ್ದರೂ ಕೂಡ, ಕರೀಮ್ ನಗರ ಮತ್ತು ಮೇದಕ್ ಜಿಲ್ಲೆಗಳಲ್ಲಿ ಹಿಂಸಾಚಾರ ಮುಂದುವರಿದ ಬಗ್ಗೆ ವರದಿಯಾಗಿದೆ.

ಈ ಮಧ್ಯೆ, ತನ್ನ ನಾಯಕರ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಪ್ರಕರಣವನ್ನು ಪ್ರತಿಭಟಿಸಿ ಟಿಡಿಪಿ ಮೆಹಬೂಬ್ ನಗರ ಜಿಲ್ಲೆಯಲ್ಲಿ ಹಂದ್‌ಗೆ ಕರೆ ನೀಡಿದ್ದು, ಅಲ್ಲಲ್ಲಿ ರಸ್ತೆ ತಡೆ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ