ತೆಲಂಗಾಣ ರಚನೆ ವಿರೋಧಿಸಿ ಆಂಧ್ರ ಮುಖ್ಯಮಂತ್ರಿ ರಾಜೀನಾಮೆ ಬಹುತೇಕ ಖಚಿತ

ಮಂಗಳವಾರ, 18 ಫೆಬ್ರವರಿ 2014 (12:25 IST)
PR
PR
ಆಂಧ್ರಪ್ರದೇಶ ರಾಜ್ಯ ವಿಭಜಿಸಿ ತೆಲಂಗಾಣ ರಚನೆ ತೀವ್ರ ವಿವಾದವನ್ನು ಸೃಷ್ಟಿಸಿದೆ. ಲೋಕಸಭೆಯಲ್ಲಿ ಇಂದು ತೆಲಂಗಾಣ ರಚನೆ ಕುರಿತು ಚರ್ಚೆ ನಡೆಯುತ್ತಿದ್ದು, ತೆಲಂಗಾಣ ಪರ-ವಿರೋಧಿ ಸದಸ್ಯರ ಘೋಷಣೆ ಸದನದಲ್ಲಿ ಮುಗಿಲುಮುಟ್ಟಿತು. ತೆಲಂಗಾಣ ರಚನೆ ವಿರೋಧಿಸಿ ಆಂಧ್ರ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರು ಇಂದು ರಾಜೀನಾಮೆ ನೀಡುವ ಸಾಧ್ಯತೆಯಿದೆ. ಸೀಮಾಂಧ್ರ ಸದಸ್ಯರು ಕೂಡ ರಾಜೀನಾಮೆ ನೀಡುತ್ತಾರೆಂದು ಹೇಳಲಾಗುತ್ತಿದೆ. ತೀವ್ರ ಕೋಲಾಹಲದಿಂದಾಗಿ ಲೋಕಸಭೆಯಲ್ಲಿ ಸ್ಪೀಕರ್ ಮೀರಾಕುಮಾರಿ ಸದನದ ಕಲಾಪವನ್ನು ಮುಂದೂಡಿದರು.

ಸೀಮಾಂಧ್ರ ಭಾಗದ ಸದಸ್ಯರು ಸದನದ ಬಾವಿಗೆ ಇಳಿದು ಕೋಲಾಹಲ ನಡೆಸಿದ್ದರಿಂದ ಕಲಾಪ ನಡೆಸಲು ಅಸಾಧ್ಯವಾಯಿತು. ಮಧ್ಯಾಹ್ನದ ನಂತರ ತೆಲಂಗಾಣ ಮಸೂದೆ ಅನುಮೋದನೆಯಾಗುವ ನಿರೀಕ್ಷೆಯಿದೆ. ತೆಲಂಗಾಣ ರಾಜ್ಯ ರಚನೆ ಮಸೂದೆಯನ್ನು ಶತಾಯಗತಾಯ ಅನುಮೋದಿಸಲು ಕಾಂಗ್ರೆಸ್ ಸಂಕಲ್ಪಿಸಿದೆ.

ಆದರೆ ಬಿಜೆಪಿ ಯಾವುದೇ ಕೋಲಾಹಲವಿಲ್ಲದೇ ಚರ್ಚೆ ನಡೆದರೆ ಮಸೂದೆಗೆ ಬೆಂಬಲಿಸುವುದಾಗಿ ತಿಳಿಸಿದೆ. ಮಸೂದೆ ಅನುಮೋದನೆಯಾದರೆ ಕಿರಣ್ ಕುಮಾರ್ ರೆಡ್ಡಿ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ. ಇಂದು ಕಿರಣ್ ಕುಮಾರ್ ರೆಡ್ಡಿ ರಾಜೀನಾಮೆ ನೀಡುತ್ತಾರೆಂದು ಕಾನೂನು ಸಚಿವ ಪ್ರತಾಪ್ ರೆಡ್ಡಿ ಹೇಳಿಕೆ ಕೊಟ್ಟಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಕೂಡ ರೆಡ್ಡಿ ರಾಜೀನಾಮೆ ನೀಡಿ ಹೊಸ ಪಕ್ಷವನ್ನು ಸ್ಥಾಪಿಸಲಿದ್ದಾರೆ ಎಂದು ಪ್ರತಾಪ್ ರೆಡ್ಡಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ