ದಲಿತರನ್ನು ಅವಮಾನಿಸಿದ್ದು ನಾನಲ್ಲ ಸೋನಿಯಾ ಗಾಂಧಿ: ಬಾಬಾ ರಾಮದೇನ್

ಮಂಗಳವಾರ, 29 ಏಪ್ರಿಲ್ 2014 (13:24 IST)
ಹಿಮಾಚಲದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರಾಮ್‌ದೇವ್, ಚುನಾವಣಾ ಆಯೋಗವು ಕಾಂಗ್ರೆಸ್‌ನ ನಿಯಂತ್ರಣದಲ್ಲಿದೆ. ಆಯೋಗ ಸರಿಯಾಗಿ ಕಾರ್ಯನಿರ್ವಹಿಸಲು ಕಾಂಗ್ರೆಸ್ ಬಿಡುತ್ತಿಲ್ಲ. ನನ್ನ ಯೋಗ ಕಾರ್ಯಕ್ರಮಗಳನ್ನು ರದ್ದು ಮಾಡುವಂತೆ ಆಯೋಗಕ್ಕೆ ಒತ್ತಡ ಹೇರುತ್ತಿದೆ. ಇದು ಕಾಂಗ್ರೆಸ್‌ನ ತೀವ್ರ ಹತಾಶೆಯನ್ನು ತೋರಿಸುತ್ತಿದೆ ಎಂದು ಯೋಗ ಗುರು ಬಾಬಾ ರಾಮದೇನ್ ಹೇಳಿದ್ದಾರೆ.
 
ದಲಿತರನ್ನು ನಾನು ಅವಮಾನಿಸಿಲ್ಲ, ಅವರನ್ನು ಅವಮಾನಿಸಿದ್ದು ಸೋನಿಯಾ. ನಾನು 'ಹನಿಮೂನ್‌' ಎಂಬ ಪದವನ್ನು ರಾಜಕೀಯ ಸನ್ನಿವೇಶದಲ್ಲಿ ಬಳಸಿದ್ದೆ ಎಂದಿದ್ದಾರೆ ರಾಮ್‌ದೇವ್. ಜತೆಗೆ, ನಿಷೇಧ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರುತ್ತೇನೆ ಎಂದೂ ಅವರು ಹೇಳಿದ್ದಾರೆ.
 
ಚುನಾವಣಾ ಆಯೋಗ ಹೇರಿದ್ದ ನಿಷೇಧವನ್ನು ಯೋಗಗುರು ಬಾಬಾ ರಾಮ್‌ದೇವ್ ಉಲ್ಲಂಘಿಸಿದ್ದಾರೆ. ಆಯೋಗದ ನಿಷೇಧವನ್ನು ಲೆಕ್ಕಿಸದೇ ರಾಮ್‌ದೇವ್ ಸೋಮವಾರ ಹಿಮಾಚಲಪ್ರದೇಶದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಚುನಾವಣಾ ಆಯೋಗವನ್ನು ಕಾಂಗ್ರೆಸ್ ದುರುಪಯೋಗಪಡಿಸುತ್ತಿದೆ ಎಂದೂ ಆರೋಪಿಸಿದ್ದಾರೆ.
 
 
ಇತ್ತೀಚೆಗಷ್ಟೇ ರಾಹುಲ್ ಅವರು ದಲಿತರ ಮನೆಗೆ 'ಹನಿಮೂನ್‌' ಹಾಗೂ 'ಪಿಕ್‌ನಿಕ್‌'ಗಾಗಿ ಹೋಗುತ್ತಾರೆ ಎಂದು ಹೇಳುವ ಮೂಲಕ ರಾಮ್‌ದೇವ್ ಭಾರಿ ವಿವಾದ ಸೃಷ್ಟಿಸಿದ್ದರು. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಮತ್ತು ಹಿಮಾಚಲಪ್ರದೇಶದಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸದಂತೆ ಆಯೋಗವು ರಾಮ್‌ದೇವ್‌ಗೆ ನಿಷೇಧ ಹೇರಿತ್ತು.
 
ಮತ್ತಷ್ಟು ಕಡೆ ನಿಷೇಧ: ಇದೇ ವೇಳೆ, ಹಿಮಾಚಲಪ್ರದೇಶದಲ್ಲಿ ಬಿಜೆಪಿ ಪರ ಪ್ರಚಾರ ನಡೆಸುವ ರಾಮ್‌ದೇವ್ ಆಸೆಗೆ ಆಯೋಗ ತಣ್ಣೀರೆರಚಿದೆ. ಕಾಂಗ್ರಾ, ಚಂಬಾ ಮತ್ತು ನೂರ್ಪುರ್‌ನಲ್ಲಿ ಅವರು ಪ್ರಚಾರ ನಡೆಸಲು ನಿರ್ಧರಿಸಿದ್ದರು. ಆದರೆ ಅಲ್ಲಿ ಪ್ರಚಾರಕ್ಕೆ ರಾಮ್‌ದೇವ್‌ಗೆ ಚುನಾವಣಾ ಆಯೋಗ ಸೋಮವಾರ ನಿಷೇಧ ಹೇರಿದೆ. ಏತನ್ಮಧ್ಯೆ, ಮೇ 1 ಮತ್ತು 2ರಂದು ಅಮೇಠಿಯಲ್ಲಿ ನಡೆಯಲಿದ್ದ ಕಾರ್ಯಕ್ರಮಕ್ಕೂ ಅಲ್ಲಿನ ಜಿಲ್ಲಾಡಳಿತ ನಿಷೇಧ ಹೇರಿದೆ.
 
ಮತ್ತೊಂದು ಪ್ರಕರಣ: ಈ ನಡುವೆ, ಬಿಹಾರ ಸಚಿವ, ಜೆಡಿಯು ನಾಯಕ ಶ್ಯಾಮ್ ರಜಾಕ್ ಅವರೂ ರಾಮ್‌ದೇವ್ ವಿರುದ್ಧ ದೂರು ದಾಖಲಿಸಿದ್ದಾರೆ. 'ಹನಿಮೂನ್‌' ಹೇಳಿಕೆಗೆ ಸಂಬಂಧಿಸಿ ಬಿಹಾರದ ಚೀಫ್ ಜ್ಯುಡೀಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ದೂರು ದಾಖಲಿಸಲಾಗಿದೆ. ಜತೆಗೆ, ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲೂ ಎಸ್‌ಸಿ/ಎಸ್ಟಿ ಕಾಯ್ದೆಯನ್ವಯ ರಾಮ್‌ದೇವ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 

ವೆಬ್ದುನಿಯಾವನ್ನು ಓದಿ