ದಾವೂದ್ ಹಸ್ತಾಂತರ ಮನವಿಗೆ ಪಾಕಿಸ್ತಾನ ಮೌನ

ಗುರುವಾರ, 23 ಜುಲೈ 2009 (09:31 IST)
ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರನ್ನು ಹಸ್ತಾಂತರಿಸುವಂತೆ ಪದೇ ಪದೇ ಮಾಡಲಾಗಿರುವ ಮನವಿಗೆ ಪಾಕಿಸ್ತಾನ ಇದುವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಎಂದು ಬುಧವಾರ ಲೋಕಸಭೆಗೆ ತಿಳಿಸಲಾಯಿತು.

ದಾವೂದ್ ಮತ್ತು ಆತನ ಸಹಚರರನ್ನು ಹಸ್ತಾಂತರಿಸುವಂತೆ 2004ರಿಂದ 2007ರವರೆಗೆ ಅನೇಕ ಬಾರಿ ಪಾಕಿಸ್ತಾನವನ್ನು ಒತ್ತಾಯಿಸಲಾಗಿದೆ. ಆದರೆ ಪಾಕಿಸ್ತಾನ ಈ ಬಗ್ಗೆ ಪ್ರತಿಕ್ರಿಯಿಸದಿರುವುದು ದುರದೃಷ್ಟಕರ ಸಂಗತಿ ಎಂದು ವಿದೇಶಾಂಗ ಖಾತೆಯ ರಾಜ್ಯ ಸಚಿವೆ ಪ್ರಣೀತ್ ಕೌರ್ ಪ್ರಶ್ನೋತ್ತರ ವೇಳೆಯಲ್ಲಿ ಹೇಳಿದರು.

ದಾವೂದ್ ಸಂಬಂಧ ಹೊಂದಿರುವ ಲಷ್ಕರ್ ಎ ತೊಯ್ಬಾ ಮತ್ತು ಜಮಾತ್ ಉದ್ ದವಾ ಸಂಘಟನೆಗಳನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಭಯೋತ್ಪಾದನಾ ಸಂಘಟನೆಗಳು ಎಂದು ಘೋಷಿಸಿರುವುದುದರಿಂದ ಅಲ್ಲಿಗೂ ಮನವಿ ಮಾಡಲಾಗಿದೆ ಎಂದು ಹೇಳಿದರು.

ಅಲ್ಲದೇ ಕೆಲವು ರಾಷ್ಟ್ರಗಳು ನೀಡುತ್ತಿರುವ ಹಣಕಾಸು ನೆರವನ್ನು ಪಾಕಿಸ್ತಾನ ಸರ್ಕಾರ ಪೂರ್ವ ನಿರ್ಧರಿತ ಕಾರ್ಯಕ್ಕೆ ಬಳಸದೆ ಅನ್ಯ ಉದ್ದೇಶಕ್ಕೆ ಬಳಸುತ್ತಿರುವುದು ಆತಂಕದ ವಿಚಾರ. ಈ ಬಗ್ಗೆಯೂ ನೆರವು ನೀಡುವ ರಾಷ್ಟ್ರಗಳ ಗಮನವನ್ನು ಭಾರತ ಸೆಳೆದಿದೆ ಎಂದು ಕೌರ್ ತಿಳಿಸಿದರು.

ವೆಬ್ದುನಿಯಾವನ್ನು ಓದಿ