ದಿಗ್ವಿಜಯ್ ನಿಮ್ಮ ವಕ್ತಾರರಾ? ಸೋನಿಯಾ, ರಾಹುಲ್‌ಗೆ ಬಿಜೆಪಿ ಪ್ರಶ್ನೆ

ಭಾನುವಾರ, 30 ಅಕ್ಟೋಬರ್ 2011 (09:35 IST)
ಧಾರ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಬಾಯಿಚಪಲ ರೋಗದಿಂದ ಬಳಲುತ್ತಿದ್ದಾರೆ ಎಂದು ಆರೋಪಿಸಿದ ಬಿಜೆಪಿ, ದಿಗ್ವಿಜಯ್ ಸಿಂಗ್ ನಿಮ್ಮ ಪಕ್ಷದ ವಕ್ತಾರರೆ ಎಂದು ಸೋನಿಯಾ ಮತ್ತು ರಾಹುಲ್‌ಗೆ ಪ್ರಶ್ನಿಸಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ವಿಶೇಷವಾಗಿ ರಾಹುಲ್ ಗಾಂಧಿ ದಿಗ್ವಿಜಯ್ ಸಿಂಗ್ ಪಕ್ಷದ ವಕ್ತಾರರೆ ಎನ್ನುವುದನ್ನು ಖಚಿತಪಡಿಸಬೇಕು ಎಂದು ಬಿಜೆಪಿ ವಕ್ತಾರರಾದ ರಾಜೀವ್ ಪ್ರತಾಪ್ ರೂಡಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಕೂಡಾ ದಿಗ್ವಿಜಯ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮನಬಂದಂತೆ ಹೇಳಿಕೆ ನೀಡಿದ ನಂತರ ತಮಗೆ ಸೋನಿಯಾ ಮತ್ತು ರಾಹುಲ್ ಗಾಂಧಿ ಕೃಪಾಕಟಾಕ್ಷವಿದೆ ಎಂದು ದಿಗ್ವಿಜಯ್ ಹೇಳುತ್ತಿರುವುದು ನಾಚಿಕೆಗೇಡಿತನದ ಸಂಗತಿಯಾಗಿದೆ ಎಂದು ಕಿಡಿಕಾರಿದ್ದಾರೆ.

ಬಾಯಿ ಚಪಲ ರೋಗದಿಂದ ಬಳಲುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವರ ಹೆಸರು ಬಹಿರಂಗಪಡಿಸಲು ನಾನು ಸಿದ್ಧನಿಲ್ಲ. ಕೆಲ ದಿನಗಳ ಹಿಂದೆ ಬಾಬಾ ರಾಮದೇವ್ ವಿರುದ್ಧ ಕಟು ಟೀಕೆ ಮಾಡಿದ್ದರು. ನಂತರ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ, ಇದೀಗ ಆರ್ಟ್ ಆಫ್ ಲೀವಿಂಗ್ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ಕೊಳಕು ತಂತ್ರಗಳ ವಿಭಾಗಕ್ಕೆ ದಿಗ್ವಿಜಯ್ ಸಿಂಗ್ ಅವರನ್ನು ಮುಖ್ಯಸ್ಥರನ್ನಾಗಿ ಮಾಡಲಾಗಿದೆಯೇ ಎನ್ನುವ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು. ಅಥವಾ ದೇಶದ ಜನತೆಯ ಗಮನವನ್ನು ಭ್ರಷ್ಟಾಚಾರದಿಂದ ಇತರೆಡೆ ಸೆಳೆಯಲು ವಿವಾದಾತ್ಮಕ ಹೇಳಿಕೆಗಳನ್ನು ನೀಡಲು ಕಾಂಗ್ರೆಸ್ ಹೈಕಮಾಂಡ್ ಹೊಣೆಗಾರಿಕೆ ವಹಿಸಿದೆಯೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷದ ಸಮಾಧಿ ತೋಡಲು ದಿಗ್ವಿಜಯ್ ಸಿಂಗ್ ಹೆಚ್ಚುವರಿ ಸಮಯ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿರುವ ಏಕೈಕ ನಾಯಕರಾಗಿದ್ದಾರೆ ಎಂದು ರೂಡಿ ವ್ಯಂಗ್ಯವಾಡಿದರು.

ವೆಬ್ದುನಿಯಾವನ್ನು ಓದಿ