ದೇಶದಲ್ಲಿಯೇ ಗುಜರಾತ್ ಅತಿ ಹೆಚ್ಚು ಸಾಲ ಹೊಂದಿದ ರಾಜ್ಯ: ಕಾಂಗ್ರೆಸ್

ಶುಕ್ರವಾರ, 29 ನವೆಂಬರ್ 2013 (13:18 IST)
PTI
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಗುಜರಾತ್ ರಾಜ್ಯದ ಅಭಿವೃದ್ಧಿಯ ಬಗ್ಗೆ ಬೊಗಳೆ ಬಿಡುತ್ತಿದ್ದು, ಸತ್ಯಾಂಶದಿಂದ ದೂರವಾಗಿವೆ.ದೇಶದಲ್ಲಿಯೇ ಅತಿ ಹೆಚ್ಚು ಸಾಲಗಾರ ರಾಜ್ಯವಾಗಿದೆ. ಮೋದಿ ಹಿರೋ ಅಲ್ಲ ಝಿರೋ ಅಲ್ಲ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

ಗುಜರಾತ್ ಅಭಿವೃದ್ಧಿಯ ಬಗ್ಗೆ ವಿವಿಧ ಇಲಾಖೆಗಳು ಸಲ್ಲಿಸಿದ ವರದಿಯನ್ನು ಬಿಡುಗಡೆಗೊಳಿಸಿದ ಕಾಂಗ್ರೆಸ್ ಮುಖಂಡ ಸಿಬಲ್, ಸಾಲ ಮಾಡುವುದರಲ್ಲಿ ಮಾತ್ರ ಮೋದಿ ನಂಬರ್ ಒನ್ ಮುಖ್ಯಮಂತ್ರಿಯಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಮೋದಿ ಹೀರೋ ಅಲ್ಲ ಝೀರೋ ಕೂಡಾ ಅಲ್ಲ. ಅವರ ಸ್ಥಾನ ಯಾವುದೋ ಮಧ್ಯಭಾಗದಲ್ಲಿದೆ. ದೇಶದ ಪ್ರತಿಯೊಬ್ಬ ನಾಯಕರುಗಳ ವಿರುದ್ಧ ಆರೋಪ ಮಾಡಿ ತನ್ನನ್ನು ತಾನು ದೈವಾಂಶ ಸಂಭೂತ ಎಂದು ಕರೆಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ದೇಶದಲ್ಲಿ ಅನೇಕ ರಾಜ್ಯಗಳು ಗುಜರಾತ್‌ಗಿಂತ ಅಭಿವೃದ್ಧಿ ಹೊಂದಿವೆ. ದೆಹಲಿ ಹಲವಾರು ಕ್ಷೇತ್ರಗಳಲ್ಲಿ ಗುಜರಾತ್‌ಗಿಂತ ಮುಂದಿದೆ. ಮೋದಿ ಇತಿಹಾಸವನ್ನು ಅಂಕಿ ಅಂಶಗಳನ್ನು ಬದಲಿಸಿ ತನ್ನದೇ ಆದ ಸುಳ್ಳಿನ ಕಂತೆಗಳನ್ನು ಜನತೆಯ ಮುಂದಿಡುತ್ತಾರೆ. ಇಂತಹ ಪೊಳ್ಳು ಮಾತುಗಳನ್ನು ಜನತೆ ನಂಬುವುದಿಲ್ಲ ಎಂದರು.

ದೆಹಲಿಯ ಸರಾಸರಿ ಅಭಿವೃದ್ಧಿ ದರ ಶೇ.11.39 ರಷ್ಟಿದ್ದರೆ ಗುಜರಾತ್ ರಾಜ್ಯದ ಸರಾಸರಿ ಅಭಿವೃದ್ಧಿ ದರ ಶೇ.10.13 ರಷ್ಟಿದೆ. ಎಫ್‌ಡಿಐ ಹೂಡಿಕೆಯಲ್ಲಿ ದೆಹಲಿ 30 ಬಿಲಿಯನ್ ಡಾಲರ್ ಮುಂದಿದೆ. ಗುಜರಾತ್ ರಾಜ್ಯದಲ್ಲಿ ಕೇವಲ 10 ಮಿಲಿಯನ್ ಡಾಲರ್ ಹೂಡಿಕೆಯಾಗಿದೆ ಎಂದು ಅಂಕಿ ಅಂಶಗಳನ್ನು ಬಹಿರಂಗಪಡಿಸಿದರು.

ಮೋದಿ ಗುಜರಾತ್ ರಾಜ್ಯವನ್ನು ಸ್ವರ್ಗವಾಗಿಸಿದಂತೆ ಜಂಭ ಕೊಚ್ಚಿಕೊಳ್ಳುತ್ತಿದ್ದಾರೆ. ನನ್ನಂತ ನಾಯಕರು ದೇಶದಲ್ಲಿ ಮತ್ತೊಬ್ಬರಿಲ್ಲ ಎಂದು ಅಹಂಕಾರದ ಮಾತುಗಳನ್ನಾಡಿ ಸುಳ್ಳು ಅಂಕಿ ಅಂಶಗಳ ಮೇಲೆ ಪ್ರಧಾನಿ ಸ್ಥಾನದ ಮೇಲೆ ಕಣ್ಣಿರಿಟ್ಟಿರುವ ಧೋರಣೆ ಸರಿಯಲ್ಲ ಎಂದು ಕೇಂದ್ರ ಸಚಿವ ಕಪಿಲ್ ಸಿಬಲ್ ಟೀಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ