ದೇಶದ ಕೆಟ್ಟ ರಾಜಕೀಯವನ್ನು ಬಿಜೆಪಿ ಬದಲಾಯಿಸಲಿದೆ: ಅಡ್ವಾಣಿ

ಸೋಮವಾರ, 29 ಮಾರ್ಚ್ 2010 (14:45 IST)
ರಾಜಕೀಯ ನಾಯಕರಿಗೆ ಸಾರ್ವಜನಿಕರಿಂದ ಗೌರವ ಕಡಿಮೆಯಾಗುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿರುವ ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ, ತನ್ನ ಪಕ್ಷವು ಭಾರತದ ಅಸಹ್ಯ ರಾಜಕಾರಣವನ್ನು ಬದಲಾಯಿಸುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ.

1947ಕ್ಕಿಂತ ಮೊದಲು ರಾಜಕೀಯ ನಾಯಕರುಗಳಿಗೆ ಜನ ಕೊಡುತ್ತಿದ್ದ ಗೌರವ ಈಗಿಲ್ಲ. ಆಗಿನ ಪರಿಸ್ಥಿತಿಗಿಂತ ಈಗ ಸಂಪೂರ್ಣ ಭಿನ್ನವಾಗಿದೆ ಎಂದು ಬೊರಿವಿಲಿಯಲ್ಲಿ ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರಾಮ್ ನಾಯ್ಕ್ ಅವರಿಗೆ ಏರ್ಪಡಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.

ನೀವೇನು ಮಾಡುತ್ತಿದ್ದೀರಿ ಎಂದು ಯಾರಾದರೂ ಕೇಳಿದಾಗ ನಾನು ರಾಜಕಾರಣದಲ್ಲಿದ್ದೇನೆ ಎಂದು ಹೇಳುವುದು ನನಗೆ ತೀರಾ ಮುಜುಗರ ಹುಟ್ಟಿಸುತ್ತದೆ. ಈ ಕೀಳಭಿರುಚಿಯ ಭಾರತೀಯ ರಾಜಕೀಯ ಅಥವಾ ಕೆಟ್ಟ ರಾಜಕಾರಣವನ್ನು ಬದಲಾಯಿಸುವ ಪ್ರಮುಖ ಉದ್ದೇಶ ಬಿಜೆಪಿಗಿದೆ ಎಂದು ಅಡ್ವಾಣಿ ತಿಳಿಸಿದ್ದಾರೆ.

ಮೂರು ಬಾರಿ ಶಾಸಕ ಹಾಗೂ ಐದು ಸಲ ಸಂಸದರಾಗಿರುವ ನಾಯ್ಕ್ ಅವರನ್ನು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರು ಕೂಡ ಶ್ಲಾಘಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಿವಸೇನೆ ಕಾರ್ಯನಿರ್ವಾಹಕ ಅಧ್ಯಕ್ಷ ಉದ್ಧವ್ ಠಾಕ್ರೆ, ಹಿರಿಯ ಬಿಜೆಪಿ ನಾಯಕ ಗೋಪಿನಾಥ್ ಮುಂಡೆ ಮುಂತಾದವರು ಪಾಲ್ಗೊಂಡಿದ್ದರು.

ರಾಷ್ಟ್ರೀಯ ಸುರಕ್ಷತೆ ಅಪಾಯದಲ್ಲಿದೆ: ಬಿಜೆಪಿ
ಮುಂಬೈ ದಾಳಿ ಕುರಿತ 'ಕರಾಚಿ ಪ್ರೊಜೆಕ್ಟ್' ಮಾಹಿತಿಗಳು ಬಯಲಾಗಬಹುದು ಎಂಬ ಕಾರಣಕ್ಕಾಗಿ ಅಮೆರಿಕಾವು ಉಗ್ರ ಡೇವಿಡ್ ಹೆಡ್ಲಿಯನ್ನು ದೆಹಲಿಯಲ್ಲಿ ವಿಚಾರಣೆ ನಡೆಸಲು ಭಾರತಕ್ಕೆ ಅವಕಾಶ ನೀಡಿಲ್ಲ ಎಂದು ಹೇಳಿರುವ ಬಿಜೆಪಿ, ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವು ರಾಜತಾಂತ್ರಿಕ ವೇದಿಕೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಾ ಪ್ರಹಾರ ಮಾಡಿದೆ.

ಭದ್ರತೆಯು ಸಮರ್ಥರ ಕೈಯಲ್ಲಿಲ್ಲ. ಹಾಗಾಗಿ ದೇಶದ ಸುರಕ್ಷತೆ ಬಗ್ಗೆ ನನಗೆ ತೀವ್ರ ಆತಂಕ ಕಾಡುತ್ತಿದೆ ಎಂದು ಪತ್ರಕರ್ತರೊಂದಿಗೆ ಮಾತನಾಡುತ್ತಾ ಬಿಜೆಪಿ ಪ್ರಧಾನ ವಕ್ತಾರ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ