ನಂಬಿದ್ರೆ ನಂಬಿ ಬಿಟ್ರೆ ಬಿಡಿ: 60 ಬಾರಿ ವಿವಾಹವಾದ ಜಾರ್ಖಂಡ್‌ನ ಕಾಂಗ್ರೆಸ್ ಸಂಸದ

ಶನಿವಾರ, 28 ಡಿಸೆಂಬರ್ 2013 (17:05 IST)
PR
ಜಾರ್ಖಂಡ್‌ನ ಬುಡಕಟ್ಟು ಸಮುದಾಯದ ಬಗುಣ್ ಸುಂಬ್ರೈ ಐದು ಬಾರಿ ಸಂಸದರಾಗಿ ಆಯ್ಕೆಯಾಗಿ ಜನಪ್ರಿಯತೆ ಪಡೆದಿದ್ದಾರೆ. ಇದೀಗ 60ನೇ ಬಾರಿ ವಿವಾಹವಾಗುವ ಮೂಲಕ ಮತ್ತೆ ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ.

1977ರಲ್ಲಿ ಆಲ್ ಇಂಡಿಯಾ ಜಾರ್ಖಂಡ್ ಪಾರ್ಟಿ ರಚಿಸಿ ಮೊದಲ ಬಾರಿಗೆ ಚುನಾವಣೆ ಗೆದ್ದು ಸಂಸತ್ತು ಪ್ರವೇಶಿಸಿದ್ದರು. ಆದರೆ, 1980ರಲ್ಲಿ ಜನತಾ ಪಕ್ಷದಿಂದ ಜಯಗಳಿಸಿ ಸಂಸದರಾಗಿದ್ದರು. ನಂತರ 1984. 1989 ಮತ್ತು 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಗಳಿಸಿ ಸಂಸತ್ ಪ್ರವೇಶಿಸಿದ್ದರು.

1967ರಿಂದ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ 89 ವರ್ಷ ವಯಸ್ಸಿನ ಬಗುಣ್ ಸಾಂಬ್ರೆ, ತಮ್ಮ ವೈಯಕ್ತಿಕ ಜೀವನದಲ್ಲೂ ರೋಚಕತೆಯನ್ನು ಹೊಂದಿದ್ದಾರೆ.

ನಾನು ಎಷ್ಟು ಮದುವೆಯಾಗಿದ್ದೇನೆ ಎನ್ನುವ ಬಗ್ಗೆ ನಾನೇ ಮರೆತುಹೋಗಿದ್ದೇನೆ, ಸದ್ಯಕ್ಕೆ ಐದು ಪತ್ನಿಯರಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, ಆತನ ಸಂಬಂಧಿಕರು ಮಾತ್ರ ಆತನಿಗೆ 60 ಮಂದಿ ಪತ್ನಿಯರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಮಾಧ್ಯಮದ ವರದಿಗಾರರು ನಿಮ್ಮ ಪತ್ನಿಯರೆಷ್ಟು ಎಂದು ಪ್ರಶ್ನಿಸಿದಾಗ, ನೀವೇ ಹುಡುಕಿ ಎಷ್ಟು ಮಂದಿ ಪತ್ನಿಯರ ಬಗ್ಗೆ ನೆನಪಿಡಲು ಸಾಧ್ಯ ಎಂದು ಗೊಣಗಿದ್ದಾರೆ.

ನನಗೆ ದೇವರು ಕೃಷ್ಣ ರೋಲ್ ಮಾಡೆಲ್. ಅವರು 16 ಸಾವಿರ ಯುವತಿಯರನ್ನು ಮದುವೆಯಾಗಿದ್ದಾರೆ. ಆದರೂ ಜನತೆ ಅವರನ್ನು ದೇವರೆಂದು ಕರೆಯುತ್ತಾರೆ. ಬಹುಪತ್ನಿತ್ವ ನಮ್ಮ ಸಮುದಾಯದಲ್ಲಿ ಸಾಮಾನ್ಯವಾಗಿದೆ ಎಂದು ತಿಳಿಸಿದ್ದಾರೆ.

60 ಬಾರಿ ವಿವಾಹದ ಹಿಂದಿರುವ ಕಾರಣಗಳ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ನಾನು ಯಾವುದೇ ಯುವತಿಯ ಹಿಂದೆ ಹೋಗುವುದಿಲ್ಲ. ಯುವತಿಯರೇ ನನ್ನ ಹಿಂದೆ ಬೀಳುತ್ತಾರೆ. ಒಂದು ವೇಳೆ ಅವರಿಗೆ ನಾನು ಆಕರ್ಷಕವಾಗಿ ಕಂಡರೆ ಅದರಲ್ಲಿ ನನ್ನ ತಪ್ಪಿಲ್ಲ.ನನ್ನನ್ನು ಮದುವೆಯಾಗಬಯಸುವ ಯಾವುದೇ ಮಹಿಳೆಯನ್ನು ನಾನು ನಿರಾಶೆಗೊಳಿಸುವುದಿಲ್ಲ ಎಂದು ಕಾಂಗ್ರೆಸ್ ಸಂಸದ ಬಗುಣ್ ಸುಂಬ್ರೆ ನುಲಿದಿದ್ದಾರೆ.

ವೆಬ್ದುನಿಯಾವನ್ನು ಓದಿ