ನಕಲಿ ಸಿಡಿ ಜಾಲ ಉಗ್ರರ ಆದಾಯದ ಮೂಲ

ಶನಿವಾರ, 7 ಮಾರ್ಚ್ 2009 (13:22 IST)
ಭಯೋತ್ಪಾದನಾ ಕೃತ್ಯಗಳ ರೂವಾರಿ ದಾವೂದ್ ಇಬ್ರಾಹಿಂನಂತಹ ವ್ಯಕ್ತಿಗಳು ಒಳಗೊಂಡಿರುವ ಸಿನಿಮಾಗಳ ನಕಲಿ ಸಿಡಿ ಜಾಲವು ವಿಶ್ವಾದ್ಯಂತ ಉಗ್ರರರ ಆದಾಯಗಳ ಮೂಲ ಎಂಬುದಾಗಿ ಅಮೆರಿಕ ಚಿಂತಕರ ಚಿಲುಮೆಯೊಂದು ಹೇಳಿದೆ.

ಈ ಅತ್ಯಂತ ಲಾಭದಾಯಕ ವ್ಯವಹಾರದಲ್ಲಿ ದಕ್ಷಿಣ ಏಶ್ಯಾ ಪ್ರಾಂತ್ಯಗಳಲ್ಲಿ ಕಾರ್ಯಾಚರಿಸುತ್ತಿರುವ ಪ್ರಮುಖರ ಪಟ್ಟಿಯಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸೇರಿದ್ದಾನೆ ಎಂಬುದಾಗಿ ಕ್ಯಾಲಿಫೋರ್ನಿಯಾ ಮೂಲದ ರಾಂಡ್(ಅರ್ಎಎನ್‌ಡಿ) ತನ್ನ ಇತ್ತೀಚಿನ ವರದಿ 'ಫಿಲ್ಮ್ ಪೈರಸಿ, ಆರ್ಗನೈಸ್ಡ್ ಕ್ರೈಂ ಆಂಡ್ ಟೆರರಿಸಂ'ನಲ್ಲಿ ಹೇಳಿದೆ.

ರಾಜಕೀಯ ಕಾರ್ಯಸೂಚಿಯಿಂದ ಉತ್ತೇಜಿತವಾದ ಭಯೋತ್ಪಾದನಾ ಕೃತ್ಯಗಳಿಗೆ ಬಳಸಲು ದಾವೂದ್‌ನ ಡಿ ಕಂಪೆನಿಯು ಸಿನಿಮಾಗಳ ನಕಲಿ ಸಿಡಿಗಳ ವ್ಯವಹಾರದ ಹಣವನ್ನು ಬಳಸುತ್ತಿದೆ ಎಂದು ವರದಿ ಹೇಳಿದೆ.

"ಬ್ಯಾಂಕಾಕ್‌ನಿಂದ ದುಬೈ ತನಕದ ಕ್ರಿಮಿನಲ್ ಗ್ಯಾಂಗ್‌ಗಳನ್ನು ನಡೆಸುವ ಗಾಡ್‌ಫಾದರ್‌ಗಳಿಗೆ ದಾವೂದ್ ಭಾರತದ ಗಾಡ್‌ಫಾದರ್. ದಾವೂದ್‌ನ ಡಿ ಕಂಪೆನಿಯು ಬಲವಾದ ಸಶಸ್ತ್ರ ರಕ್ಷಣೆ, ಮಾದಕ ದ್ರವ್ಯಗಳ ಕಳ್ಳಸಾಗಣೆ, ಸುಲಿಗೆ, ಕೊಲೆ ಎಲ್ಲವುಗಳಿಗೂ ಸಹಾಯ ನೀಡುವುದರಲ್ಲಿ ನಿರತವಾಗಿದೆ" ಎಂದು ವರದಿ ಹೇಳಿದೆ.

ನಕಲಿ ಸಿಡಿಗಳ ವ್ಯವಹಾರವು ಮಾದಕ ವಸ್ತುಗಳ ಕಳ್ಳಸಾಗಣೆ ಹಾಗೂ ಇಂತಹ ಇನ್ನಿತರ ಅಕ್ರಮ ವ್ಯವಹಾರಗಳಿಗಿಂತ ಹೆಚ್ಚು ಲಾಭದಾಯಕವಾದುದು ಎಂಬುದಾಗಿ ವರದಿ ಹೇಳುತ್ತದೆ.

ಮಲೇಶ್ಯಾದಲ್ಲಿ 70 ಸೆಂಟ್‌ಗಳಿಗೆ ಮಾಡಲಾಗಿರುವ ನಕಲಿ ಸಿಡಿಗಳು ಲಂಡನ್‌ನಲ್ಲಿ ಸುಮಾರು ಒಂಬತ್ತು ಡಾಲರ್‌ಗಳಿಗಿಂತಲೂ ಅಧಿಕ ಬೆಲೆಗೆ ಮಾರಾಟವಾಗುತ್ತಿದ್ದು, ಇದು ಶೇ.1000ಕ್ಕಿಂತ ಹೆಚ್ಚು ಲಾಭದಾಯಕವಾಗಿದೆ ಎಂದು ವರದಿಯು ಒಂದು ಉದಾಹರಣೆಯನ್ನು ಉಲ್ಲೇಖಿಸಿದೆ.

ಇದು ಇರಾನಿನ ಹೆರಾಯಿನ್ ಅಥವಾ ಕೊಲಂಬಿಯಾದ ಕೊಕೇನ್ ಸಾಗಟಕ್ಕಿಂತ ಮೂರು ಶೇಕಡಾ ಅಧಿಕ ಲಾಭ ನೀಡುತ್ತದೆಯಂತೆ.

ವೆಬ್ದುನಿಯಾವನ್ನು ಓದಿ