ನಡುರಸ್ತೆಯಲ್ಲಿ ಮಹಿಳೆಗೆ ಬ್ಯಾಟಿನಿಂದ ಹಿಗ್ಗಾಮುಗ್ಗಾ ಥಳಿತ

ಶುಕ್ರವಾರ, 27 ಸೆಪ್ಟಂಬರ್ 2013 (13:24 IST)
PTI
PTI
ಇಲ್ಲಿನ ರಸ್ತೆಯೊಂದರಲ್ಲಿ ಮಹಿಳೆಯೊಬ್ಬಳೊಂದಿಗೆ ಜಗಳಕ್ಕಿಳಿದ ವ್ಯಕ್ತಿಯೊಬ್ಬ ಬೇಸ್‌ಬಾಲ್‌ ಬ್ಯಾಟಿನಿಂದ ಆಕೆಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಮಹಿಳೆ ನೆಲಕ್ಕುರುಳಿದರೂ ಬಿಡದೇ ತನ್ನ ರೋಷಾವೇಷವನ್ನೆಲ್ಲಾ ಆಕೆಯ ಮೇಲೆ ತೋರಿಸಿದ್ದಾನೆ. ಸುತ್ತಲೂ ಜನರು ಓಡಾಡುತ್ತಿದ್ದರೂ ಯಾರೋಬ್ಬರೂ ಆಕೆಯ ಸಹಾಯಕ್ಕೆ ಬಾರದೇ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಲೇ ಇದ್ದರು..!

ಮಹಿಳೆಯನ್ನು ಹೀಗೆ ನಡುರಸ್ತೆಯಲ್ಲಿ ಥಳಿಸಲು ಕಾರಣ ಏನು ಗೊತ್ತಾ?

ಆ ಮಹಿಳೆಯು ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಚಲಿಸುತ್ತಿದ್ದಳು. ಆಗ ಚಿಕ್ಕದೊಂದು ಅಪಘಾತವಾಗಿಬಿಟ್ಟಿದೆ. ಇದರಿಂದ ಸಿಟ್ಟಿಗೆದ್ದ ಯುವಕನೊಬ್ಬ ಆಕೆಯ ಕಾರಿನ ಬಳಿಗೆ ಬಂದು ಆಕೆಯನ್ನು ಹೊರಗೆ ಎಳೆದು ಥಳಿಸಿದ್ದಾನೆ. ನಡು ರಸ್ತೆಯಲ್ಲಿ ಬ್ಯಾಟಿನಿಂದ ಥಳಿಸಿ ತನ್ನ ರೋಷವನ್ನು ತೀರಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ, ಆಕೆಯ ಕಾರನ್ನು ಕೂಡ ನಜ್ಜುಗುಜ್ಜು ಮಾಡಿದ್ದಾನೆ.

ಈ ಸಂದರ್ಭದಲ್ಲಿ ಆಕೆಯ ಸ್ನೇಹಿತರು ಕಾರಿನಲ್ಲಿ ಇದ್ದರಾದರೂ, ಯಾರೊಬ್ಬರೂ ಆಕೆಯನ್ನು ಬಿಡಿಸಲು ಮುಂದಾಗಲಿಲ್ಲ. ಇನ್ನು ರಸ್ತೆಯ ಅಕ್ಕಪಕ್ಕದಲ್ಲಿ ಓಡಾಡುತ್ತಿದ್ದ ಪುರುಷರೂ ಕೂಡ ಆಕೆಯ ಸಹಾಯಕ್ಕೆ ಬರಲಿಲ್ಲ.

ನಂತರದಲ್ಲಿ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೋಲೀಸರು ಅಕೆಯ ರಕ್ಷಣೆ ಮಾಡಿದ್ದಾರೆ. ಯುವತಿಯ ಕೈ, ಕಾಲು, ಭುಜ, ಬೆನ್ನು, ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಾಯಗಳಾಗಿದ್ದು ರಸ್ತೆಯಲ್ಲಿ ರಕ್ತ ಚೆಲ್ಲಿದೆ. ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ