ನನ್ನ ಹೆಸರಿಗೆ ಕಳಂಕ ತರಲು ಕಾಂಗ್ರೆಸ್ ಸಂಚು ರೂಪಿಸಿದೆ: ಬಾಬಾ ರಾಮದೇವ್

ಮಂಗಳವಾರ, 22 ಅಕ್ಟೋಬರ್ 2013 (17:29 IST)
PTI
ಉತ್ತರಾಖಂಡ್ ಪೊಲೀಸರು ಸಹೋದರ ರಾಮಭರತ್ ಮತ್ತು ಸಹಚರ ನರೇಶ್ ಮಲಿಕ್ ವಿರುದ್ಧ ಅಪಹರಣ ಮತ್ತು ದೌರ್ಜನ್ಯ ಪ್ರಕರಣ ದಾಖಲಿಸಿ ಕಾಂಗ್ರೆಸ್ ಪಕ್ಷ ತಮ್ಮ ಹೆಸರಿಗೆ ಕಳಂಕ ತರಲು ಸಂಚು ರೂಪಿಸಿದೆ ಎಂದು ಯೋಗಾ ಗುರು ಬಾಬಾ ರಾಮದೇವ್ ಆರೋಪಿಸಿದ್ದಾರೆ.

ಇಂದೋರ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ರಾತ್ರಿ ಖಾಸಗಿ ಟೆಲಿವಿಜನ್ ಚಾನೆಲ್‌ಗಳಲ್ಲಿ ನನ್ನ ಮತ್ತು ನನ್ನ ಸಹೋದರ ವಿರುದ್ಧ ಅಪಹರಣ ಸುದ್ದಿಯನ್ನು ಬಿತ್ತರಿಸುತ್ತಿರುವ ಸಂಗತಿ ಸತ್ಯಕ್ಕೆ ದೂರ ಮತ್ತು ಆಧಾರರಹಿತವಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ನನ್ನ ಹೆಸರಿಗೆ ಮಸಿ ಬಳೆಯಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಸರಕಾರದಿಂದ ಅಪರಾಧಿ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ಇತ್ತೀಚಿನ ಕೆಲ ಘಟನೆಗಳನ್ನು ನೋಡಿದಲ್ಲಿ ನನ್ನನ್ನು ಬಲಿಪಶುವಾಗಿಸುವ ಷಡ್ಯಂತ್ರ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರಕಾರದ ರಾಜಕೀಯ ತಂತ್ರಗಳಲ್ಲಿ ನನ್ನ ವಿರುದ್ಧ ಆರೋಪ ಹೊರಿಸುವ ಯತ್ನಗಳು ನಡೆದಿವೆ. ಪತಾಂಜಲಿ ಆಶ್ರಮದಲ್ಲಿ ವೇಶ್ಯೆಯರನ್ನು ಸೇರ್ಪಡೆಗೊಳಿಸಿ ಅವರನ್ನು ಬಂಧಿಸಿದ ನಂತರ ನನ್ನನ್ನು ಕಾಮುಕ ಎಂದು ಜನತೆಯ ಮುಂದಿಡುವ ಪ್ರಯತ್ನಗಳೂ ನಡೆದಿವೆ ಎಂದು ಯೋಗಾ ಗುರು ಬಾಬಾ ರಾಮದೇವ್ ಗುಡುಗಿದ್ದಾರೆ.

ವೆಬ್ದುನಿಯಾವನ್ನು ಓದಿ