ನರೇಂದ್ರ ಮೋದಿ ಪೋಸ್ಟರ್‌ಗಳಿಗೆ ಕಪ್ಪು ಮಸಿ ಬಳೆದ ಎಸ್‌ಪಿ ಕಾರ್ಯಕರ್ತರು

ಸೋಮವಾರ, 24 ಮಾರ್ಚ್ 2014 (17:11 IST)
"ಹರ್ ಹರ್ ಮೋದಿ, ಘರ ಘರ ಮೋದಿ" ಎನ್ನುವ ಘೋಷಣೆ ವಿವಾದದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ಸೋಮವಾರ ವಾರಣಾಸಿಯಲ್ಲಿ ನರೇಂದ್ರ ಮೋದಿಯವರ ಪೋಸ್ಟರ್‌ಗಳ ಮೇಲೆ ಕಪ್ಪು ಮಸಿ ಬಳೆದಿದ್ದಾರೆ.
PTI

ಮೋದಿಯ ಪೋಸ್ಟರ್ ಮೇಲೆ ಬರೆದಿದ್ದ ಹರ್ ಹರ್ ಮೋದಿ, ಘರ ಘರ ಮೋದಿ ಎಂಬ ಘೋಷಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಮಾಜವಾದಿ ಪಕ್ಷ ಸೇರಿದಂತೆ ಧಾರ್ಮಿಕ ಮತ್ತು ರಾಜಕೀಯ ನಾಯಕರು 'ಈ ಘೋಷಣೆ ದೇವರಿಗೆ(ಶಿವ) ಮಾಡಿರುವ ಅಪಮಾನ' ಎಂದು ಹೇಳಿದ್ದಾರೆ.

ವಿರೋಧ ವ್ಯಕ್ತವಾದ ಕೂಡಲೇ ಮೋದಿ ತಮ್ಮ ಕಾರ್ಯಕರ್ತರಿಗೆ ಆ ಘೋಷಣೆಯನ್ನು ಬಳಸದಂತೆ ಮನವಿ ಮಾಡಿಕೊಂಡಿದ್ದಾರೆ.

ಆದರೆ, ಮೋದಿಯನ್ನು ಮಹಾದೇವ್(ದೇವ) ನಿಗೆ ಹೋಲಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ವಿರುದ್ಧ ಕೋಪಗೊಂಡ ಸಮಾಜವಾದಿ ಪಕ್ಷದ ಕಾರ್ಯಕರ್ತರು ಘೋಷಣೆ ಕೂಗಿ ಪ್ರತಿಭಟಿಸಿದರು.

ಇದನ್ನು ಅಪಹಾಸ್ಯ ಮಾಡಲು ತಾವು ಕೂಡಾ ಪೋಸ್ಟರ್‌ನ್ನು ಬಿಡುಗಡೆ ಮಾಡಿರುವ ಸಮಾಜವಾದಿ ಕಾರ್ಯಕರ್ತರು 'ಥರ್ ಥರ- ಮೋದಿ, ಡರ್- ಡರ್ ಮೋದಿ' ( ಹೆದರಿರುವ ಮೋದಿ, ನಡುಗುತಿರುವ ಮೋದಿ) ಎಂದು ಬರೆದಿದ್ದಾರೆ.

ಪಕ್ಷದ ನಾಯಕ ಅರುಣ್ ಗುಪ್ತಾ ಈ ಪೋಸ್ಟರ್‌ನ್ನು ಅಲಹಾಬಾದಿನ ಎಲ್ಲಾ ಮುಖ್ಯ ಸ್ಥಳಗಳಲ್ಲಿ ಅಂಟಿಸಿದ್ದಾರೆ.

ಬಿಜೆಪಿ ತನ್ನ ಸಾರ್ವಜನಿಕ ಸಮಾವೇಶಗಳು ಮತ್ತು ಪ್ರಚಾರದ ವೇಳೆ 'ಹರ್ ಹರ್ ಮೋದಿ, ಘರ ಘರ ಮೋದಿ' ಎಂಬ ಘೋಷಣೆಯನ್ನು ಬಳಸಿಕೊಂಡಿತ್ತು . ಆದರೆ ವಿವಾದದ ಹಿನ್ನೆಲೆಯಲ್ಲಿ ರಾಜ್ಯದ ನಾಯಕರು ಘೋಷಣೆಯನ್ನು ಕೈಬಿಟ್ಟಿದ್ದಾರೆ.

ಈ ಘೋಷಣೆಯಿಂದಾಗಿ ಮನನೊಂದಿರುವ ದ್ವಾರಕಾ ಪೀಠದ ಶಂಕರಾಚಾರ್ಯರಾದ ಸ್ವರೂಪಾನಂದ ಸರಸ್ವತಿ "ವ್ಯಕ್ತಿ ಪೂಜೆಯನ್ನು ನಿಲ್ಲಿಸಿ" ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಕೂಡ ಈ ಘೋಷಣೆಯನ್ನು ಬಲವಾಗಿ ವಿರೋಧಿಸಿದ್ದು, ಆ ಕುರಿತು ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ