ನಾನು 2ಜಿ ಹಡಗಿನ ಕ್ಯಾಪ್ಟನ್‌ನಂತೆ: ಎ.ರಾಜಾ

ಬುಧವಾರ, 30 ನವೆಂಬರ್ 2011 (15:50 IST)
PTI
2ಜಿ ತರಂಗ ಗುಚ್ಚ ಹಗರಣದ ಪ್ರಮುಖ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರೂ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಜಾಮೀನಿಗೆ ಅರ್ಜಿ ಸಲ್ಲಿಸದಿರುವುದು ಕುತೂಹಲ ಕೆರಳಿಸಿದೆ.

ಮಾಧ್ಯಮಗಳೊಂದಿಗೆ ಮಾಜಿ ಟೆಲಿಕಾಂ ಸಚಿವ ಎ.ರಾಜಾ, ಮಾತನಾಡಿ ನಾನು 2ಜಿ ಹಡಗಿನ ನಾಯಕನಂತೆ. ಪ್ರತಿಯೊಬ್ಬರು ಹಡುಗಿನಿಂದ ಹೊರಹೋದ ನಂತರ ನನ್ನ ಸರದಿ ಬರುತ್ತದೆ ಎಂದು ಹೇಳಿದ್ದಾರೆ.

2ಜಿ ಹಗರಣದಲ್ಲಿ ಆರೋಪಿಗಳಾಗಿದ್ದ ಡಿಎಂಕೆ ಸಂಸದೆ ಕನಿಮೋಳಿ, ಕಲೈಂಜ್ಞರ್ ಟಿವಿ ಚಾನೆಲ್ ವ್ಯವಸ್ಥಾಪಕ ಶರದ್ ಕುಮಾರ್, ಸ್ವಾನ್ ಟೆಲಿಕಾಂ ಸಂಚಾಲಕ ಶಾಹೀದ್ ಉಸ್ಮಾನ್ ಬಲ್ವಾ, ಬಾಲಿವುಡ್ ಚಿತ್ರ ನಿರ್ಮಾಪಕ ಕರೀಮ್ ಮೋರಾನಿ ಮತ್ತು ಕುಸೆಂಗಾಂಲ್ ಫ್ರುಟ್ಸ್ ಆಂಡ್ ವೆಜಿಟೇಬಲ್‌ ನಿರ್ದೇಶಕರಾದ ರಾಜೀವ್ ಅಗರ್‌ವಾಲ್ ಮತ್ತು ಆಸೀಫ್ ಬಲ್ವಾ ಜಾಮೀನು ಪಡೆದು ತಿಹಾರ್ ಜೈಲಿನಿಂದ ಹೊರಬಂದಿದ್ದಾರೆ.

ನಾನು ಇಲ್ಲಿಯವರೆಗೆ ಜಾಮೀನಿಗಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿಲ್ಲ. ಇದೀಗ, ಪ್ರತಿಯೊಬ್ಬರು ಜಾಮೀನು ಪಡೆದು ಹೊರಬರುತ್ತಿರುವುದರಿಂದ ಶೀಘ್ರದಲ್ಲಿ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

2ಜಿ ಹಗರಣದಲ್ಲಿ 14 ಆರೋಪಿಗಳಲ್ಲಿ ಕೇವಲ ಮೂವರು ಮಾತ್ರ ತಿಹಾರ್ ಜೈಲಿನಲ್ಲಿದ್ದಾರೆ. ಮಾಜಿ ಟೆಲಿಕಾಂ ಸಚಿವ ಎ.ರಾಜಾ, ಮಾಜಿ ಟೆಲಿಕಾಂ ಕಾರ್ಯದರ್ಶಿ ಸಿದ್ಧಾರ್ಥ ಬೆಹುರಾ ಮತ್ತು ರಾಜಾ ಅವರ ಆಪ್ತ ಕಾರ್ಯದರ್ಶಿ ಆರ್‌.ಕೆ.ಚಾಂಡೋಲಿಯಾ ಜೈಲಿನಲ್ಲಿರುವ ಆರೋಪಿಗಳಾಗಿದ್ದಾರೆ.

ವೆಬ್ದುನಿಯಾವನ್ನು ಓದಿ