ನಾನೇ ಸಲ್ಮಾನ್ ಎಂದು ವಂಚಿಸಿದವನಿಗೆ ಪೊಲೀಸರಿಂದ ಪೂಜೆ!

ಗುರುವಾರ, 28 ಜನವರಿ 2010 (18:10 IST)
IFM
ವೆಬ್‌ಸೈಟ್‌ ಒಂದರಲ್ಲಿ ನಕಲಿ ಖಾತೆಯನ್ನು ತೆರೆದು, ನಾನೇ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಎಂದು ಪೋಸು ಕೊಟ್ಟದ್ದಲ್ಲದೆ ಅಭಿಮಾನಿಗಳಿಂದ ಲಕ್ಷಾಂತರ ರೂಪಾಯಿಗಳನ್ನು ಸುಲಿಗೆ ಮಾಡಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಸೆರೆಮನೆಗೆ ಕಳುಹಿಸಿದ್ದಾರೆ.

ಇಂತಖವಾಬ್ ಆಲಮ್ ಯಾನೆ ಇಂತೆಕಾಬ್ ಆಲಿ ಫರ್ವೇಜ್ ಖಾನ್ ಯಾನೆ ಗಾಥಿಯಾ ಬಾಲಂ ಪಠಾಣ್ (36) ಎಂಬ ಸೂರತ್‌ನ ರಂದೇರ್ ಎಂಬಲ್ಲಿನ ವ್ಯಕ್ತಿ ವೆಬ್‌ಸೈಟ್ ಒಂದರಲ್ಲಿ ಅಭಿಮಾನಿಗಳನ್ನು ವಂಚಿಸುತ್ತಿದ್ದ.

'ಹಿಂದಿ ಸಾಂಗ್ಸ್ ಡಾಟ್ ಕಾಮ್' ವೆಬ್‌ಸೈಟಿನ 'ಐ ಲವ್ ಮೈ ಆಲ್ ಫ್ಯಾನ್' ಎಂಬ ಹೆಸರಿನ ಖಾತೆಗೆ ಸಾಕಷ್ಟು ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದ ಆತ ತಾನೇ ಸಲ್ಮಾನ್ ಖಾನ್ ಎಂದು ಹೇಳಿಕೊಂಡಿದ್ದ. ಅಲ್ಲದೆ ಅಭಿಮಾನಿಗಳು ತನ್ನ ಸಮಾಜ ಸೇವಾ ಸಂಸ್ಥೆಗೆ ಆರ್ಥಿಕ ಸಹಾಯ ಮಾಡಬೇಕೆಂದು ಬರೆದುಕೊಂಡಿದ್ದ. ಇದನ್ನು ನಂಬಿದ್ದ ಅಭಿಮಾನಿಗಳು, ಇವನೇ ಸಲ್ಮಾನ್ ಅಂದುಕೊಂಡಿದ್ದರು.

ತನ್ನ ಮೊಬೈಲ್ ನಂಬರನ್ನೂ ವೆಬ್‌ಸೈಟಿನಲ್ಲಿ ಪ್ರಕಟಿಸಿ, ಫೋನ್ ಮಾಡಿದಾಗ ಸಲ್ಮಾನ್‌ನಂತೆ ಮಾತನಾಡಿ ಹಲವರನ್ನು ವಂಚಿಸಿದ್ದ.

ಈತನ ಮೋಡಿಗೆ ಮರುಳಾಗಿದ್ದ ಹಲವು ವಿದೇಶೀಯರು ಹಣವನ್ನೂ ಕಳುಹಿಸಿದ್ದರು. ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನ ನರ್ಸ್ ಒಬ್ಬರು 1.61 ಲಕ್ಷ ರೂಪಾಯಿ ಹಾಗೂ ಲಂಡನ್‌ನಲ್ಲಿರುವ ಪಾಕಿಸ್ತಾನಿ ಮೂಲದ ಮಹಿಳೆಯೊಬ್ಬರು ನಾಲ್ಕು ಕಂತುಗಳಲ್ಲಿ ಹಣ ರವಾನಿಸಿದ್ದರು.

ಇನ್ನು ಕೆಲವರು ದುಬಾರಿ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಈತನಿಗೆ 'ಅಭಿಮಾನಿಗಳ ಕಾಣಿಕೆ'ಯೆಂದು ಕಳುಹಿಸಿದ್ದರು. ದೂರೊಂದರ ಜಾಡು ಹಿಡಿದ ಉಗ್ರ ನಿಗ್ರಹ ದಳ (ಎಟಿಎಸ್) ಆತನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದೆ.

ಈ ನಡುವೆ ಬಂಧಿತನ ಅಂಕಲ್ ಕೂಡ ಕುಕೃತ್ಯಗಳಿಗೆ ಪ್ರಸಿದ್ಧಿಯಾಗಿದ್ದು, ಪ್ರಸಕ್ತ ಅಹಮದಾಬಾದ್‌ನಲ್ಲಿರುವ ಸಬರಮತಿ ಜೈಲಿನಲ್ಲಿದ್ದಾನೆ ಎಂಬ ಕುತೂಹಲಕಾರಿ ಅಂಶವೂ ಬಯಲಾಗಿದೆ. ಸೂರತ್‌ನಲ್ಲಿ 29 ಜೀವಂತ ಬಾಂಬ್‌ಗಳನ್ನು ಆಯಕಟ್ಟಿನ ಸ್ಥಳದಲ್ಲಿಡುತ್ತಿರುವ ಸಂದರ್ಭದಲ್ಲಿ ಆತ ಪೊಲೀಸರಿಗೆ ಸಿಕ್ಕಿಬಿದ್ದಿದ್ದ.

ವೆಬ್ದುನಿಯಾವನ್ನು ಓದಿ