ನುಡಿದಂತೆ ನಡೆದ ಕೇಜ್ರಿವಾಲ್: ದೆಹಲಿ ನಾಗರಿಕರಿಗೆ 20 ಸಾವಿರ ಲೀಟರ್ ನೀರು ಉಚಿತ

ಸೋಮವಾರ, 30 ಡಿಸೆಂಬರ್ 2013 (18:53 IST)
PTI
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ದೆಹಲಿ ನಾಗರಿಕರಿಗೆ ಮಾಸಿಕವಾಗಿ 20 ಸಾವಿರ ಲೀಟರ್ ಉಚಿತ ನೀರು ಪೂರೈಕೆ ಭರವಸೆ ಈಡೇರಿಸಿ ನುಡಿದಂತೆ ನಡೆದುಕೊಂಡು ಜನಮನ್ನಣೆ ಗಳಿಸಿದೆ. ಜನೆವರಿ 1 ರಿಂದ ದೆಹಲಿ ನಾಗರಿಕರು ಪ್ರತಿ ದಿನ 700 ಲೀಟರ್ ನೀರು ಉಚಿತವಾಗಿ ಪಡೆಯಲಿದ್ದಾರೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ನಡೆದ ಜನ ಮಂಡಳಿಯ 18 ಜನ ಸದಸ್ಯರ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ಮೂಲಗಳು ತಿಳಿಸಿವೆ.

ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ದೆಹಲಿ ನಾಗರಿಕರಿಗೆ ಉಚಿತ ನೀರು ಸರಬರಾಜು ಒದಗಿಸಲಾಗುವುದು ಎಂದು ಆಮ್ ಆದ್ಮಿ ಪಕ್ಷ ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಮೂರು ತಿಂಗಳುಗಳ ನಂತರ ಪರಿಷ್ಕರಣೆ ನಡೆಸಲಾಗುವುದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ನೀರಿನ ಪೈಪ್‌ಗಳಿಗೆ ಮೀಟರ್ ಹೊಂದಿರುವ ಸಾರ್ವಜನಿಕರು 700 ಲೀಟರ್‌ಗಳೊಳಗೆ ಬಳಸಿದಲ್ಲಿ ಯಾವುದೇ ಹಣ ಪಾವತಿಸಬೇಕಾಗಿಲ್ಲ. ಆದರೆ, 700 ಲೀಟರ್‌ಗಿಂತ ಹೆಚ್ಚು ಬಳಸುವ ಕುಟುಂಬಗಳು ಪೂರ್ಣ ಪ್ರಮಾಣದ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ದೆಹಲಿ ಜಲಮಂಡಳಿಯ ಸಿಇಒ ವಿಜಯ್ ಕುಮಾರ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಅರ್ಧದಷ್ಟು ಜನರ ನೀರಿನ ಪೈಪ್‌ಗಳಿಗೆ ಮೀಟರ್‌ಗಳಿಲ್ಲ ಮತ್ತು ಅರ್ಧದಷ್ಟು ಜನರಿಗೆ ನೀರು ಸರಬರಾಜಿಲ್ಲ. ಕೇಜ್ರಿವಾಲ್ ಸರಕಾರ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎನ್ನುವುದನ್ನು ಕಾದು ನೋಡುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಮತೀನ್ ಅಹ್ಮದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ