ಪಾಕಿಸ್ತಾನವನ್ನೂ ಕಾಡುತ್ತಿದೆ ಭಯೋತ್ಪಾದನೆ: ಸಿಂಗ್

ಸೋಮವಾರ, 30 ಮೇ 2011 (14:58 IST)
ಪಾಕಿಸ್ತಾನದಲ್ಲಿ ಭಯೋತ್ಪಾದನಾ ಯಂತ್ರವು ಇನ್ನೂ ಗಟ್ಟಿಯಾಗಿ ನೆಲೆ ನಿಂತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತೀಯ ಪ್ರಧಾನಿ ಮನಮೋಹನ್ ಸಿಂಗ್, ಪಾಕಿಸ್ತಾನವು ಈಗಲಾದರೂ "ಎಚ್ಚೆತ್ತುಕೊಂಡು", ಭಾರತವನ್ನು ಗುರಿಯಾಗಿರಿಸಿ ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಜಿಹಾದಿ ಬಣಗಳನ್ನು ಮಟ್ಟ ಹಾಕುವಂತೆ ಒತ್ತಾಯಿಸಿದ್ದಾರೆ.

ಕರಾಚಿಯಲ್ಲಿ ಇತ್ತೀಚೆಗೆ ನಡೆದ ಆತ್ಮಾಹುತಿ ದಾಳಿಯ ಕುರಿತಾಗಿ ಪಾಕಿಸ್ತಾನಕ್ಕೆ ಕಳುಹಿಸಿರುವ ಸಂದೇಶದಲ್ಲಿ ಅವರು, ಅಲ್ಲಿರುವ ಭಯೋತ್ಪಾದನಾ ಯಂತ್ರವು ಬೇರೆಯವರಿಗೆ ಎಷ್ಟು ತೊಂದರೆ ಕೊಡುತ್ತದೋ, ಪಾಕ್‌ಗೂ ಅಷ್ಟೇ ಸಮಸ್ಯೆ ತಂದೊಡ್ಡುತ್ತಿದೆ ಎಂಬುದನ್ನು ಅದರ ನಾಯಕಮಣಿಗಳು ಅರಿತುಕೊಳ್ಳಬೇಕು ಮತ್ತು ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.

ಭಯೋತ್ಪಾದನೆಯು ಪಾಕಿಸ್ತಾನದ ಸರಕಾರೀ ನೀತಿಯ ಉಪಕರಣವಾಗಿಬಿಟ್ಟಿದೆ. ಇದನ್ನು ವಿಶ್ವದ ನಾಗರಿಕ ಸಮಾಜವೆಂದಿಗೂ ಒಪ್ಪಲಾರದು. ಈ ಕುರಿತು ಅದರ ಮನವೊಲಿಸಲು ಬೇಕಾದ ಎಲ್ಲ ರೀತಿಯ ಪ್ರಯತ್ನಗಳನ್ನೂ ಭಾರತವು ಮಾಡಲಿದೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ನೆರೆ ರಾಷ್ಟ್ರವಾಗಿ ಪಾಕಿಸ್ತಾನದಲ್ಲಿ ಗಟ್ಟಿಯಾಗಿ ನೆಲೆಯೂರಿರುವ ಭಯೋತ್ಪಾದನಾ ಯಂತ್ರದ ಕುರಿತಾಗಿ ನಮಗೂ ಅಷ್ಟೇ ಕಳವಳ ಇದೆ ಎಂದು ಪ್ರಧಾನಿ ನುಡಿದರು.

ವೆಬ್ದುನಿಯಾವನ್ನು ಓದಿ