ಪಾಕ್ ಪೈಶಾಚಿಕ ಕೃತ್ಯ: ಗಡಿಯಲ್ಲಿ ತೀವ್ರ ಉದ್ವಿಗ್ನತೆ

ಗುರುವಾರ, 17 ಜನವರಿ 2013 (12:19 IST)
ನಿಯಂತ್ರಣ ರೇಖೆಯಲ್ಲಿ ಇಬ್ಬರು ಯೋಧರನ್ನು ಪೈಶಾಚಿಕವಾಗಿ ಕೊಂದಿರುವುದಲ್ಲದೆ ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ಉಪಟಳ ನೀಡುತ್ತಿರುವ ಪಾಕಿಸ್ಥಾನದ ವಿರುದ್ಧ ನಿಲುವು ಕಠಿಣಗೊಳಿಸಿರುವ ಭಾರತ, ಗಡಿಯ ಉದ್ವಿಗ್ನತೆ ಉಭಯ ದೇಶಗಳ ನಡುವಣ ಆರ್ಥಿಕ ಸಂಬಂಧಗಳ ಕಡಿತಕ್ಕೆ ಕಾರಣವಾಗಬಹುದು ಎನ್ನುವ ಕಟು ಎಚ್ಚರಿಕೆಯನ್ನು ನೀಡಿದೆ.

ಇದೇ ವೇಳೆ ಭಾರತ ಮತ್ತು ಪಾಕಿಸ್ಥಾನದ ವಾಣಿಜ್ಯ ಸಚಿವರ ನಡುವೆ ಮಾತುಕತೆ ನಡೆಯುವ ಸಾಧ್ಯತೆಯನ್ನು ಅಲ್ಲಗಳೆಯಲಾಗಿದೆ. ಆಗ್ರಾದಲ್ಲಿ ಜ. 27ರಂದು ಜರಗಲಿರುವ ವಿಶ್ವ ವ್ಯವಹಾರ ಸಮಾವೇಶದಲ್ಲಿ ಭಾಗವಹಿಸಲು ಪಾಕಿಸ್ಥಾನದ ವಾಣಿಜ್ಯ ಸಚಿವರನ್ನು ಆಹ್ವಾನಿಸಲಾಗಿತ್ತು. ಆದರೆ ಗಡಿಯ ಉದ್ವಿಗ್ನತೆಯ ಕಾರಣ ಪಾಕ್‌ ಸಚಿವರು ಈ ಸಮಾವೇಶದಲ್ಲಿ ಭಾಗವಹಿಸುವ ಸಾಧ್ಯತೆಯಿಲ್ಲ.

ಇಬ್ಬರು ಯೋಧರ ಶಿರಚ್ಛೇದ ಮಾಡಿ ಒಂದು ತಲೆಯನ್ನು ಒಯ್ದಿರುವ ಪಾಕಿಸ್ಥಾನ ಸೈನಿಕರ ಕೃತ್ಯವನ್ನು ಭೀಕರ ಎಂದು ಬಣ್ಣಿಸಿರುವ ವಾಣಿಜ್ಯ ಸಚಿವ ಆನಂದ್‌ ಶರ್ಮ ಇದು ಅಸಮ್ಮತ ಮತ್ತು ಪ್ರಚೋದನಕಾರಿ ಕ್ರಮ. ಉಭಯ ದೇಶಗಳ ಆರ್ಥಿಕ ಹಿತ ಎಲ್ಲಿದೆ ಎನ್ನುವುದನ್ನು ಪಾಕಿಸ್ಥಾನ ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.

ಉಭಯ ದೇಶಗಳ ನಡುವಣ ಪ್ರಸಕ್ತ ವಾತಾವರಣ ವಾಣಿಜ್ಯ ಸಂಬಂಧವನ್ನು ಉತ್ತೇಜಿಸುವುದಕ್ಕೆ ಪೂರಕವಾಗಿಲ್ಲ ಎಂದ ಶರ್ಮ, ಶಾಂತಿ ಮತ್ತು ಸ್ಥಿರತೆಯಿದ್ದರೆ ಮಾತ್ರ ಆರ್ಥಿಕ ಸಂಬಂಧಗಳು ಬೆಳೆಯುತ್ತವೆ ಮತ್ತು ಈ ವಾತಾವರಣವನ್ನು ಕೆಡಿಸುವ ಯಾವುದೇ ಪರಿಸ್ಥಿತಿ ಪೂರಕವಾಗಿರುವುದಿಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ