ಪೆಟೋಲ್ ದರ ಇಳಿಕೆ, ಡೀಸೆಲ್ ದರ ಏರಿಕೆ ಸಾಧ್ಯತೆ

ಶುಕ್ರವಾರ, 5 ಅಕ್ಟೋಬರ್ 2012 (10:18 IST)
PR
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗಿರುವುದು ಮತ್ತು ಡಾಲರ್‌ ಎದುರು ರೂಪಾಯಿ ಮೌಲ್ಯ ಚೇತರಿಕೆಯಾಗಿರುವ ಹಿನ್ನೆಲೆಯಲ್ಲಿ ಶೀಘ್ರವೇ ಪೆಟ್ರೋಲ್‌ ಬೆಲೆಯಲ್ಲಿ 1.60 ರೂ. ಇಳಿಕೆಯಾಗುವ ಸಾಧ್ಯತೆ ಇದೆ. ಹಾಗೆಯೇ ಡೀಸೆಲ್‌ ಬೆಲೆ ಮತ್ತೆ 5 ರೂ. ಏರುವ ನಿರೀಕ್ಷೆಯಿದೆ.

ಮೂಲಗಳ ಪ್ರಕಾರ ಸೆ.16ರಿಂದಲೇ ತೈಲ ಕಂಪನಿಗಳು ಪೆಟ್ರೋಲ್‌ ಮಾರಾಟದಿಂದ ಲೀ.ಮೇಲೆ 2 ರೂ. ಲಾಭ ಮಾಡಿಕೊಳ್ಳುತ್ತಿವೆ. ಇನ್ನು ಅ.1ರಿಂದ ಈ ಲಾಭಾಂಶದಲ್ಲಿ ಅಲ್ಪ ಇಳಿಕೆಯಾಗಿದ್ದು ಅದು 1.60 ರೂ.ಗೆ ಇಳಿದಿದೆ. ಹೀಗಾಗಿ ಈ ಮಾಸಾಂತ್ಯದಲ್ಲಿ ಈ ಲಾಭವನ್ನು ಗ್ರಾಹಕರಿಗೆ ಹಸ್ತಾಂತರ ಮಾಡಲು ತೈಲ ಕಂಪನಿಗಳು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.

ಆದರೆ ಅಷ್ಟರ ಒಳಗೆ ಮತ್ತೆ ಕಚ್ಚಾ ತೈಲ ಬೆಲೆ ಏರಿಕೆಯಾಗಿ, ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿದರೆ ಬೆಲೆ ಇಳಿಕೆ ನಿರ್ಧಾರ ಮುಂದುಹೋಗುವ ಸಾಧ್ಯತೆ ಇದೆ.

ಡೀಸೆಲ್‌ ಬೆಲೆ ಮತ್ತೆ ಏರಿಕೆ:

ಇತ್ತೀಚೆಗಷ್ಟೇ ಡೀಸೆಲ್‌ ಬೆಲೆಯನ್ನು ಲೀ.ಗೆ 5 ರೂ. ಏರಿಕೆ ಮಾಡಿ ಶಾಕ್‌ ನೀಡಿದ್ದ ಕೇಂದ್ರ ಸರ್ಕಾರ ಇನ್ನು ಕೆಲವೇ ತಿಂಗಳಲ್ಲಿ ಡೀಸೆಲ್‌ ಬೆಲೆಯನ್ನು ಮತ್ತೆ 5 ರೂ. ಏರಿಸುವ ಬಗ್ಗೆ ಒಲವು ವ್ಯಕ್ತಪಡಿಸಿದೆ. ಕಳೆದ ಬಾರಿಯ ಏರಿಕೆಯ ಹೊರತಾಗಿಯೂ ಪ್ರತಿ ಲೀ.ಡೀಸೆಲ್‌ ಮೇಲೆ 14 ರೂ. ಸಬ್ಸಿಡಿ ಹೊರೆ ಸರ್ಕಾರಕ್ಕೆ ಬೀಳುತ್ತಿದೆ. ಇದನ್ನು ಇನ್ನು 6 ತಿಂಗಳ ಒಳಗಾಗಿ 8-9ರೂ.ಗೆ ಇಳಿಸುವ ಇರಾದೆ ಹೊಂದಿದೆ. ಈ ಮೂಲಕ ವಿತ್ತೀಯ ಕೊರತೆಯನ್ನು ಮತ್ತಷ್ಟು ತಗ್ಗಿಸುವ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಪ್ರಧಾನಿಗಳ ವಿತ್ತೀಯ ಸಲಹೆದಾರರು ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್‌ ಸಿಂಗ್‌ ಅಹ್ಲುವಾಲಿಯಾ ಕೂಡಾ ಬೆಲೆ ಏರಿಕೆಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ