ಪೊಲೀಸ್ ಇಲಾಖೆಗೆ ನಾನೇ ಸರ್ವಾಧಿಕಾರಿ: ಶಿವಕುಮಾರ್

ಬುಧವಾರ, 24 ಏಪ್ರಿಲ್ 2013 (12:55 IST)
WD
ಉತ್ತರ ಪ್ರದೇಶದ ಜವುಳಿ ಸಚಿವ ಶಿವ ಕುಮಾರ್‌ ಅವರು ತಮ್ಮ ಅಧಿಕಾರದ ದರ್ಪದ ನುಡಿಗಳನ್ನು ಆಡುವ ಮೂಲಕ ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ಗೆ ಇದೀಗ ಇರಿಸುಮುರಿಸು ಉಂಟುಮಾಡಿದ್ದಾರೆ. ಶಿವಕುಮಾರ್‌ ನುಡಿದಿರುವ ದರ್ಪದ ಮಾತುಗಳು ಹೀಗಿವೆ:

'ಯಾವುದೇ ಪೊಲೀಸ್‌ ಸಿಬಂದಿ ನನ್ನ ಆದೇಶ ಇಲ್ಲದೆ ಏನೂ ಮಾಡಬಾರದು. ಒಂದೊಮ್ಮೆ ಯಾವುದೇ ಪೊಲೀಸ್‌ ಸಿಬಂದಿ ನನ್ನ ಆದೇಶ ಇಲ್ಲದೇ ಏನಾದರೂ ಮಾಡಿದಲ್ಲಿ ಆತನನ್ನು ನಾನು 24 ತಾಸುಗಳ ಒಳಗೆ ಕೆಲಸದಿಂದ ಕಿತ್ತು ಹಾಕುತ್ತೇನೆ. ನನ್ನ ಆದೇಶವಿಲ್ಲದೆ ಯಾವುದೇ ಪೊಲೀಸ್‌ ಸಿಬಂದಿ ಕುಳಿತುಕೊಳ್ಳಲೂ ಬಾರದು. ಪೊಲೀಸ್‌ ಸಿಬಂದಿ ನಾನು ಹೇಳಿದಂತೆ ಕೇಳದಿದ್ದರೆ ಆತ ತನ್ನ ಕುರ್ಚಿಯಲ್ಲಿ ಒಂದು ಕ್ಷಣ ಕೂಡ ಕುಳಿತುಕೊಳ್ಳುವಂತಿಲ್ಲ. ಆತನನ್ನು 24 ತಾಸುಗಳ ಒಳಗೆ ಕೆಲಸದಿಂದ ವಜಾ ಮಾಡಲಾಗುವುದು ಎಂದು ಗುಡುಗಿದ್ದಾರೆ

ಶಿವಕುಮಾರ್‌ ಅವರ ದರ್ಪದ ನುಡಿಗಳು ಈ ರೀತಿಯದ್ದಾದರೆ ಉತ್ತರಪ್ರದೇಶದ ಮತ್ತೋರ್ವ ಸಚಿವ, ಸಮಾಜ ಕಲ್ಯಾಣ ಇಲಾಖೆಯ ಮಂತ್ರಿ ರಾಮ ಮೂರ್ತಿ ವರ್ಮಾ ಅವರ ಬೇರೆಯೇ ರೀತಿಯ ಮಾತುಗಳನ್ನು ಆಡಿ ವಿವಾದಕ್ಕೆ ಕಾರಣರಾಗಿದ್ದಾರೆ. ಅವರ ಮಾತುಗಳು ಹೀಗಿವೆ: 'ಉತ್ತರ ಪ್ರದೇಶದಲ್ಲಿ ಅಪರಾಧಗಳು ಘಟಿಸುತ್ತಲೇ ಇರುತ್ತವೆ. ಹಿಂದೆಯೇ ಅವು ನಡೆಯುತ್ತಿದ್ದವು. ಇಂದು ನಡೆಯುತ್ತಿವೆ. ಮುಂದೆಯೂ ನಡೆಯುತ್ತವೆ. ಉತ್ತರ ಪ್ರದೇಶದಲ್ಲಿ ಯಾವುದೇ ಅಧಿಕಾರ ಈ ಅಪರಾಧಗಳನ್ನು ತಡೆಯಲಾರವು'.

ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ ಈಗಾಗಲೇ ಕಳಪೆ ಆಡಳಿತಕ್ಕಾಗಿ ವಿಪಕ್ಷಗಳಿಂದ ಭಾರೀ ಟೀಕೆಗಳಿಗೆ ಗುರಿಯಾಗಿದ್ದಾರೆ. ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ರಾಜ್ಯಪಾಲರನ್ನು ಈಗಾಗಲೇ ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ