ಪ್ರಧಾನಿ ಸ್ಥಾನಕ್ಕೆ ಆಡ್ವಾಣಿ ಸೂಕ್ತ ಅಭ್ಯರ್ಥಿ: ಯಾದವ್

ಗುರುವಾರ, 4 ಅಕ್ಟೋಬರ್ 2012 (16:22 IST)
PTI
ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ.ಆಡ್ವಾಣಿ ಪ್ರಧಾನಿ ಸ್ಥಾನಕ್ಕೆ ಅರ್ಹ ಅಭ್ಯರ್ಥಿಯಾಗಿದ್ದಾರೆ ಎಂದು ಎನ್‌ಡಿಎ ಮೈತ್ರಿಕೂಟದ ಸಂಚಾಲಕ ಮತ್ತು ಜೆಡಿಯು ಮುಖ್ಯಸ್ಥ ಶರದ್ ಯಾದವ್ ಹೇಳಿಕೆ ನೀಡಿ ಬಿಜೆಪಿ ವಲಯದಲ್ಲಿ ಮತ್ತೆ ರಾಜಕೀಯ ಕೋಲಾಹಲಗಳಿಗೆ ಕಾರಣವಾಗಿದ್ದಾರೆ.

ಪ್ರಧಾನಿ ಸ್ಥಾನಕ್ಕೆ ಆಡ್ವಾಣಿ ಸೂಕ್ತ ವ್ಯಕ್ತಿ. ಅವರ ವಯಸ್ಸಿನ ಸಮಸ್ಯೆ ಕರ್ತವ್ಯಕ್ಕೆ ಅಡ್ಡಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಪಡೆದು ಪ್ರಧಾನಿ ಸ್ಥಾನಕ್ಕೆ ಆಕಾಂಕ್ಷಿಯಾಗುವ ಗುರಿಯನ್ನು ಹೊಂದಿರುವ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಕನಸಿಗೆ ಯಾದವ್ ಅಡ್ಡಗಾಲು ಹಾಕಿದ್ದಾರೆ.

ಆದಾಗ್ಯೂ, ನರೇಂದ್ರ ಮೋದಿಯವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಒಪ್ಪುವುದಿಲ್ಲ ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಹೊಸ ಪೀಳಿಗೆಯ ಮುಖಂಡರಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿ ಸ್ಥಾನಕ್ಕೆ ಆಯ್ಕೆ ಮಾಡಲಾಗುವುದು ಎಂದು ಆರೆಸ್ಸೆಸ್ ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ, ಆಡ್ವಾಣಿ ಪ್ರಧಾನಿ ಅಭ್ಯರ್ಥಿ ಪಟ್ಟಿಯಿಂದ ಹೊರಗುಳಿದಿದ್ದಾರೆ.

ಮತ್ತೊಂದೆಡೆ, ಪ್ರಧಾನಿ ಸ್ಥಾನಕ್ಕೆ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಸೂಕ್ತ ಅಭ್ಯರ್ಥಿ ಎಂದು ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಹೇಳಿಕೆ ನೀಡಿ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದಾರೆ.

ವೆಬ್ದುನಿಯಾವನ್ನು ಓದಿ