ಪ್ರೇಮ ವಿವಾಹವೇ? ಹೆತ್ತವರಿಗೆ ತಿಳಿಸೋದು ಕಡ್ಡಾಯವಂತೆ..!

ಗುರುವಾರ, 31 ಡಿಸೆಂಬರ್ 2009 (17:20 IST)
ಖಂಡಿತಾ ಇದು ಪ್ರೇಮಿಗಳಿಗೆ ಮತ್ತು ಪ್ರೇಮ ವಿವಾಹವಾಗುವವರಿಗೆ ಕೆಟ್ಟ ಸುದ್ದಿ. ಇನ್ನು ಮುಂದೆ ತುರ್ತು ವಿವಾಹಕ್ಕೆಂದು ನೋಂದಣಿ ಕಚೇರಿ ಕದ ತಟ್ಟುವವರು ತಮ್ಮ ಹೆತ್ತವರಿಗೆ ತಿಳಿಸುದುವುದು ಕಡ್ಡಾಯವೆಂಬ ನಿಯಮವನ್ನು ಜಾರಿಗೆ ತರಲು ಸರಕಾರ ಸಿದ್ಧತೆ ನಡೆಸುತ್ತಿದೆ.

ಮದುವೆಯನ್ನು ವಿಧಿವತ್ತಾಗಿ ಘೋಷಿಸುವ ಮೊದಲು ಜೋಡಿಯ ಹೆತ್ತವರು ಅಥವಾ ಕಾನೂನಿನ ಪ್ರಕಾರ ಪೋಷಕರಿಗೆ ತಿಳಿಸುವುದು ಕಡ್ಡಾಯ ಎಂಬ ನಿಯಮವನ್ನು ಪಶ್ಚಿಮ ಬಂಗಾಲ ವಿಶೇಷ ವಿವಾಹ ಕಾಯ್ದೆ ಮತ್ತು ಪಶ್ಚಿಮ ಬಂಗಾಲ ಹಿಂದೂ ವಿವಾಹ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಜಾರಿಗೆ ತರಲು ಪಶ್ಚಿಮ ಬಂಗಾಲ ಕಾನೂನು ಇಲಾಖೆ ಉದ್ದೇಶಿಸಿದೆ.

ಆದರೆ ಇಲ್ಲಿ ಪ್ರೇಮಿಗಳು ಭೀತಿಗೊಳಗಾಗುವ ಅಗತ್ಯವಿಲ್ಲ. ಯಾಕೆಂದರೆ ನಿಯಮಾವಳಿಗಳ ಪ್ರಕಾರ ಪೋಷಕರು ಅಥವಾ ಹೆತ್ತವರು ಮದುವೆಗೆ ಒಪ್ಪಿಗೆ ಸೂಚಿಸದಿದ್ದರೂ ಮದುವೆಗೆ ಯಾವುದೇ ಸಮಸ್ಯೆಯಾಗದು.

ಮದುವೆ ನೋಂದಣಿ ಸಂದರ್ಭದಲ್ಲಿ ಮದುವೆಯಾಗಬಯಸುವ ಜೋಡಿ ತಮ್ಮ ಇತ್ತೀಚಿನ ಛಾಯಾಚಿತ್ರ ಮತ್ತು ತಾವು ವಾಸ ಸ್ಥಳದ ವಿಳಾಸಗಳನ್ನು ತೋರಿಸುವ ದಾಖಲೆಗಳು, ಹೆಸರುಗಳು ಮತ್ತು ಹೆತ್ತವರು ಅಥವಾ ಪೋಷಕರ ವಿವರಗಳೊಂದಿಗೆ ಸಲ್ಲಿಸಬೇಕು. ಸರಕಾರ ನೀಡುವ ಮದುವೆ ಪ್ರಮಾಣಪತ್ರದಲ್ಲಿ ಜೋಡಿಯ ಸ್ಕ್ಯಾನ್ ಮಾಡಲಾದ ಛಾಯಾಚಿತ್ರಗಳನ್ನು ಬಳಸಲು ಕೂಡ ನಿರ್ಧರಿಸಲಾಗಿದೆ.

ಅರ್ಜಿ ಮತ್ತು ಇತರ ದಾಖಲೆಗಳನ್ನು ಪರಿಶೀಲಿಸಿದ ನಂತರ ನೋಂದಣಿ ಕಚೇರಿಯು ಜೋಡಿಯ ಹೆತ್ತವರಿಗೆ ನೊಟೀಸ್ ಕಳುಹಿಸುತ್ತದೆ. ಅದರ ಬಳಿಕವಷ್ಟೇ ರಿಜಿಸ್ಟ್ರಾರ್ ಮದುವೆ ನೋಂದಣಿ ನೊಟೀಸನ್ನು ಸಲ್ಲಿಸಲು ಅವಕಾಶವಿದೆ ಎಂದು ಕಾನೂನು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ